ಉಡುಪಿ, ಜೂ 08 (DaijiworldNews/DB): ಬಿಜೆಪಿ ಮುಖಂಡ ಯಶ್ಪಾಲ್ ಸುವರ್ಣ ಹಾಗೂ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಅವರ ತಲೆ ತೆಗೆದರೆ ತಲಾ 10 ಲಕ್ಷ ರೂ. ನೀಡುವುದಾಗಿ ಇನ್ಸ್ಟಾಂನ ಪೇಜೊಂದರಲ್ಲಿ ಬಹಿರಂಗ ಬೆದರಿಕೆ ಹಾಕಿದ ಘಟನೆ ನಡೆದಿದೆ. ಸದ್ಯ ಪೇಜ್ ವಿರುದ್ದ ಬಿಜೆಪಿ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಇಸ್ಟ್ರಾಗ್ರಾಂನ ಮಾರಿಗುಡಿ ಪೇಜ್ನಲ್ಲಿಈ ಬೆದರಿಕೆ ಹಾಕಲಾಗಿದೆ. ಪೇಜ್ ವಿರುದ್ದ ಕಾಪು ಬಿಜೆಪಿ ಯುವಮೋರ್ಚಾ ಕಾರ್ಯಕರ್ತರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಾರಿ ಗುಡಿ ಪೇಜ್ ವಿರುದ್ದ ತನಿಖೆ ನಡೆಸಿ ಕ್ರಮ ತೆಗೆದುಕೊಳ್ಳುವಂತೆ ದೂರಿನಲ್ಲಿ ಒತ್ತಾಯಿಸಲಾಗಿದೆ. ಇನ್ನು ಬೆದರಿಕೆ ಸಂಬಂಧ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಯಶ್ಪಾಲ್ ಸುವರ್ಣ, ಪೇಜ್ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಆದರೆ ನನ್ನ ತಲೆಗೆ ಬೆಲೆ ಕಟ್ಟಿದವ ಯಾರೆಂದು ಗೊತ್ತಾದರೆ ಸಂತೋಷವಾಗುತ್ತದೆ. ನನ್ನ ಬೆಲೆ ಬೆದರಿಕೆ ಹಾಕಿದವನಿಗೆ ಗೊತ್ತಿಲ್ಲ. ಹಾಗಾಗಿ ಈ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ ಎಂದಿದ್ದಾರೆ. ನಾನು ಅನ್ಯಮಾರ್ಗದಲ್ಲಿ ಹೋದವನಲ್ಲ. ನಾನು ದುಡಿದು ತಿನ್ನುವವನು. ನಾನು ದೇಶ, ರಾಷ್ಟ್ರೀಯತೆ ವಿಚಾರದಲ್ಲಿ ಹಿಂದೆ ಹಾಗೂ ಮುಂದೆ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಈ ಹಿಂದಿನಿಂದಲೂ ಟೀಕೆ, ಬೆದರಿಕೆ, ನಿಂದನೆ, ಅಪಪ್ರಚಾರ ಮೆಟ್ಟಿ ನಿಂತು ಈ ಮಟ್ಟಕ್ಕೆ ಬೆಳೆದಿದ್ದೇನೆ. ಈ ವಿಚಾರಕ್ಕೆ ತಲೆಕೆಡಿಸಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದರು.
ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ ಹಿಜಾಬ್ ಮಾರಕ ಎಂದು ದೇವರಿಗೆ ಸರಿಯಾಗಿ ಹೋರಾಟ ಮಾಡಿದ್ದೇನೆ. ಹಿಜಾಬ್ ವಿಚಾರವಾಗಿ ಬೆದರಿಕೆ ಹಾಕಲಿ ಹಾಕದೆ ಇರಲಿ ರಾಜಿ ಮಾಡುವ ಪ್ರಶ್ನೆಯೇ ಇಲ್ಲ. ಇಂತಹ ಬೆದರಿಕೆಯಿಂದ ನನ್ನ ವೇಗಕ್ಕೆ ತಡೆಯಾಗುತ್ತದೆ ಎನಿಸಿದ್ದರೆ ಆ ಆಲೋಚನೆ ಬದಿಗಿಡಿ. ಇಂತಹ ಬೆದರಿಕೆ ಹಿನ್ನಲೆ ಗನ್ ಮ್ಯಾನ್ ಕೇಳುವ ಪ್ರಮೇಯ ಇಲ್ಲ. ಹಿಂದುತ್ವ ಪರವಾಗಿ, ಸಂಘಟನಾತ್ಮಕವಾಗಿ ಬೆಳೆದು ಬಂದವನು.ಸಾಮಾಜಿಕ ಜೀವನದಲ್ಲಿ ಬಹಳಷ್ಟು ಸಂಘ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದೇನೆ. ಇಂತಹ ಪೇಜ್ಗಳಿಂದ ನಾನು ಹೆದರಿ ಮನೆಯಲ್ಲಿ ಕೂರುವವನಲ್ಲ. ಹೊರ ರಾಜ್ಯ, ಹೊರದೇಶದಲ್ಲಿ ಕುಳಿತು ಈ ಪೇಜ್ ಸೃಷ್ಟಿಸಿರಬಹುದು.ಆದರೆ ನಮ್ಮ ಜಿಲ್ಲೆಯಲ್ಲಿದ್ದು ಸಂದೇಶ ರವಾನಿಸುವವರನ್ನು ಪತ್ತೆ ಹಚ್ಚುವ ಕೆಲಸ ಆಗಬೇಕು ಎಂದವರು ಇದೇ ವೇಳೆ ಒತ್ತಾಯಿಸಿದರು.
ಇಂತಹ ಪೇಜ್ ಗಳೊಂದಿಗೆ ತೊಡಗಿಸಿಕೊಂಡವರು ನಮ್ಮ ಊರಿನಲ್ಲಿದ್ದರೆ ಮಾರಕ. ಇಂತವರಿಂದ ನಮ್ಮ ಕಾರ್ಯಕರ್ತರಲ್ಲಿ ಹಾಗೂ ಅವರ ಕುಟುಂಬಸ್ಥರಲ್ಲಿ ಭಯದ ವಾತಾವರಣ ಸೃಷ್ಟಿಯಾಗುತ್ತದೆ. ಮನೆಯಲ್ಲೇ ಮನಸ್ಥಾಪ ಸೃಷ್ಟಿಯಾಗಿ, ಕಾರ್ಯಕರ್ತರಲ್ಲಿ ಗೊಂದಲ ಸೃಷ್ಟಿ ಆಗಬಹುದು. ಹೀಗಾಗಿ ಮಾರಿಗುಡಿ ಪೇಜ್ ಹಿಂದೆ ಇರುವವರ ಮೇಲೆ ಕಡಿವಾಣ ಹಾಕಬೇಕಿದೆ. ಜಮ್ಮು ಕಾಶ್ಮೀರದ ಉಗ್ರಗಾಮಿ ಬೆಂಗಳೂರಿನಲ್ಲಿ ಹತ್ತು ವರ್ಷದ ಹಿಂದೆ ರಿಕ್ಷಾ ಬಿಡುತ್ತಿದ್ದ. ಹೀಗೆ ಗಡ್ಡ ಬಿಟ್ಟು ಟೋಪಿ ಹಾಕಿ ನಾಟಕ ಮಾಡುವವರು ಇಂತಹ ಪೇಜ್ ಹಿಂದೆ ಇರಬಹುದು ಎಂದು ಅವರು ಆಪಾದಿಸಿದರು.
ಹಿಂದುಗಳಿಗೆ ಬೆದರಿಕೆ ಹಾಕಿ ಅವರ ವೇಗ ನಿಯಂತ್ರಣ ಮಾಡಿ ಅವರ ಬೇಳೆ ಬೇಯಿಸುವವರು ಇರಬಹುದು. ಉಡುಪಿ ಜಿಲ್ಲೆ ಸಂಘಟನಾತ್ಮಕವಾಗಿದೆ. ಯಾವ ಸಂದರ್ಭದಲ್ಲಿ ಹೇಗೆ ಉತ್ತರ ಕೊಡಬೇಕೆಂದು ಗೊತ್ತಿದೆ ಎಂದು ಯಶ್ಪಾಲ್ ಸುವರ್ಣ ಖಡಕ್ ತಿರುಗೇಟು ನೀಡಿದರು.