ಸುರತ್ಕಲ್, ಜೂ 08 (DaijiworldNews/DB): ಚಿಕಿತ್ಸೆಗಾಗಿ ಕುಟುಂಬವೊಂದರ ಬ್ಯಾಂಕ್ ಖಾತೆಗೆ ಹಣ ರವಾನಿಸಲು ಬ್ಯಾಂಕ್ಗೆ ಆಗಮಿಸಿದ ಮಹಿಳೆಯೊಬ್ಬರಿಗೆ ಬ್ಯಾಂಕ್ ಸಿಬಂದಿಯ ಉಡಾಫೆಯ ವರ್ತನೆಯಿಂದ ಹೋರಾಟ ನಡೆಸಿ ಹಣ ಪಡೆದುಕೊಳ್ಳಬೇಕಾದ ಘಟನೆ ಸುರತ್ಕಲ್ನಲ್ಲಿ ನಡೆದಿದೆ.
ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವ್ಯಕ್ತಿಯ ಕುಟುಂಬಕ್ಕೆ ನೆರವಾಗುವ ದೃಷ್ಟಿಯಿಂದ ಅವರು ನೀಡಿದ ಹಣವನ್ನು ಮಹಿಳೆಯೊಬ್ಬರು ತನ್ನ ಖಾತೆಯ ಮೂಲಕ ಜಮೆ ಮಾಡಲು ಸುರತ್ಕಲ್ನ ರಾಷ್ಟ್ರೀಯ ಬ್ಯಾಂಕ್ವೊಂದರ ಶಾಖೆಗೆ ಆಗಮಿಸಿದ್ದರು. ಈ ವೇಳೆ ಎಟಿಎಂ ಯಂತ್ರದ ಮೂಲಕ ಹಣವನ್ನು ಜಮೆ ಮಾಡುವಂತೆ ಬ್ಯಾಂಕ್ ಸಿಬಂದಿ ಹೇಳಿದ್ದರಿಂದ ಮಹಿಳೆ ಯಂತ್ರದಲ್ಲಿ ಹಣ ಹಾಕಿ ರಶೀದಿಗಾಗಿ ಕಾದರು. ಆದರೆ ಪ್ರೊಸೆಸ್ ಎಂಬುದನ್ನಷ್ಟೇ ಯಂತ್ರ ತೋರಿಸುತ್ತಿತ್ತೇ ಹೊರತು ರಶೀದಿ ಹೊರ ಬಂದಿರಲಿಲ್ಲ. ಇತ್ತ ಹಣ ಖಾತೆಗೆ ಜಮೆ ಆಗದೆ ಯಂತ್ರ ಕೈಕೊಟ್ಟಿತ್ತು.
ಇದರಿಂದ ಆತಂಕಗೊಂಡ ಮಹಿಳೆ ಬ್ಯಾಂಕ್ ಸಿಬಂದಿ ಬಳಿ ವಿಷಯ ತಿಳಿಸಿದಾಗ ಮ್ಯಾನೇಜರ್ ಇಲ್ಲ, ಇದನ್ನು ಸರಿ ಮಾಡಲು ಎರಡ್ಮೂರು ದಿನ ತಗಲುತ್ತದೆ ಎಂದು ಉಡಾಫೆಯ ಉತ್ತರ ನೀಡಿದ್ದಾರೆ. ಆದರೆ ಆಕ್ರೋಶ ವ್ಯಕ್ತಪಡಿಸಿದ ಮಹಿಳೆ, ನೇರವಾಗಿ ಬ್ಯಾಂಕ್ ಖಾತೆಗೆ ಜಮೆ ಮಾಡುವುದು ಬಿಟ್ಟು ಎಟಿಎಂ ಯಂತ್ರದಲ್ಲಿ ಹಾಕಲು ಹೇಳಿ ನೀವೇ ನಿರ್ಲಕ್ಷ್ಯ ವಹಿಸಿದ್ದೀರೆಂದು ಆಕ್ರೋಶ ವ್ಯಕ್ತಪಡಿಸಿ ಹಣ ವರ್ಗಾವಣೆಗೆ ಪಟ್ಟು ಹಿಡಿದು ಅಲ್ಲೇ ಕುಳಿತರು. ಬಳಿಕ ಸ್ಥಳೀಯರು ಕೂಡಾ ಜಮಾಯಿಸಿ ಶಾಖೆಯಲ್ಲಿ ಸಿಬಂದಿಯಿಂದ ಸಾರ್ವಜನಿಕರಿಗೆ ಸ್ಪಂದನೆ ಸಿಗದಿರುವ ಬಗ್ಗೆ ಆಕ್ರೋಶ ಹೊರ ಹಾಕಿದರು. ಬಳಿಕ ಪೊಲೀಸರು ಮಧ್ಯ ಪ್ರವೇಶಿಸಿ ಕಂಪ್ಯೂಟರ್ನಲ್ಲಿ ಪರಿಶೀಲಿಸುವಂತೆ ಸೂಚಿಸಿದರು. ಈ ವೇಳೆ ಹಣ ಹಾಕಿರುವುದು ಕಂಡು ಬಂದ ಕಾರಣ ಬ್ಯಾಂಕ್ನಿಂದ ಹಣವನ್ನು ಮಹಿಳೆಗೆ ದೊರಕಿಸಿಕೊಟ್ಟರು. ಬಳಿಕ ವಿಳಂಬವಾಗಿ ಹಣ ಬಂದಲ್ಲಿ ಅದನ್ನು ಮರು ಕಳಿಸಲಾಗುವುದು ಎಂದು ಮಹಿಳೆಯಿಂದ ಮುಚ್ಚಳಿಕೆ ಪತ್ರ ಕೊಡಿಸಿದರು.