ಉಪ್ಪಿನಂಗಡಿ,ಜೂ 08 (DaijiworldNews/MS): ಕರ್ತವ್ಯ ಲೋಪದ ದೂರಿನ ಹಿನ್ನೆಲೆಯಲ್ಲಿ ಶಿರಾಡಿ ಗ್ರಾಮ ಪಂಚಾಯತ್ ಪಿಡಿಒ ವೆಂಕಟೇಶ್ ಜೂನ್ 7 ರಿಂದ ಅನ್ವಯವಾಗುವಂತೆ ಕರ್ತವ್ಯದಿಂದ ಅಮಾನತುಗೊಳಿಸಿ, ದ.ಕ ಜಿಲ್ಲಾ ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಆದೇಶ ಹೊರಡಿಸಿದ್ದಾರೆ. ಸಾರ್ವಜನಿಕರು ಹಾಗೂ ಸಂಘ ಸಂಸ್ಥೆಗಳ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಪಿಡಿಒ ನಡೆಸಿರುವ ಅವ್ಯವಹಾರಗಳ ಸಂಬಂಧ ಗ್ರಾಮಸ್ಥರು ಸೇರಿದಂತೆ ಹಲವರು ದೂರುಗಳು ಸಲ್ಲಿಸಿದ್ದರು. ಈ ಬಗ್ಗೆ ತನಿಖೆ ನಡೆಸಲು ಪ್ರತ್ಯೇಕ ತನಿಖಾ ತಂಡ ರಚಿಸಲಾಗಿತ್ತು. ತನಿಖಾ ತಂಡವು ದೂರುಗಳಲ್ಲಿನ ಅಂಶಗಳ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸಿದೆ. ಈ ತನಿಖಾ ವರದಿಯಲ್ಲಿ ಪಿಡಿಒ ಕರ್ತವ್ಯಲೋಪ ಎಸಗಿರುವುದು ಕಂಡುಬಂದ ಕಾರಣ ಅಮಾನತುಗೊಳಿಸಲಾಗಿದೆ.
ಗುಂಡ್ಯದ ಸಾರ್ವಜನಿಕ ಶೌಚಾಲಯದ ಗುತ್ತಿಗೆದಾರರ ನೇಮಕಾತಿಯಲ್ಲಿ ಕರ್ತವ್ಯ ಲೋಪ, ಅಂಗಡಿ ಕಟ್ಟಡಗಳನ್ನು ಏಲಂ ಮಾಡುವ ಸಂದರ್ಭ ನಿಯಮಗಳ ಉಲ್ಲಂಘನೆ, ಅಂಗವಿಕಲರ ನಿಧಿಯನ್ನು ನಿಯಮಾನುಸಾರ ಪಾವತಿ ಮಾಡದಿರುವುದು, ಸಿಸಿ ಕ್ಯಾಮರಾ ಖರೀದಿಯ ಸಂದರ್ಭ ದರ ಪಟ್ಟಿ, ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ ಪಾಲಿಸದಿರುವುದು, ಕಚೇರಿಗೆ ಸರಿಯಾಗಿ ಹಾಜರಾಗದಿರುವುದು, ಕೋವಿಡ್ ನಿರ್ವಹಣೆಗೆ ಬಿಡುಗಡೆಗೊಂಡ ಸರಕಾರದ ಮೊತ್ತವನ್ನು ನಿರ್ದಿಷ್ಠ ಉದ್ದೇಶಕ್ಕೆ ಬಳಸದೇ ಏಕಪಕ್ಷೀಯವಾಗಿ ಖರ್ಚು ಮಾಡಿರುವುದು, ಹೈ ಮಾಸ್ಕ್ ಸೋಲಾರ್ ಅಳವಡಿಕೆಯ ಕಾಮಗಾರಿಯಲ್ಲಿ ಇ ಟೆಂಡರ್ ಕರೆಯದೇ ಕರ್ತವ್ಯ ಲೋಪ, ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಠಾಚಾರ ಉಲ್ಲಂಘನೆ, ವಿದ್ಯುತ್ ಇಲಾಖೆಗೆ ಪಾವತಿಸಬೇಕಾದ ಮೀಟರ್ ಡೆಪಾಸಿಟ್ ಮೊತ್ತವನ್ನು ಎಲೆಕ್ಟ್ರೀಕಲ್ ಅಂಗಡಿಯವರಿಗೆ ಪಾವತಿಸಿ ಕರ್ತವ್ಯ ಲೋಪವೆಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟ ಹಿನ್ನೆಲೆಯಲ್ಲಿ ಸೇವೆಯಿಂದ ಅಮಾನತುಗೊಳಿಸುವುದು ಸೂಕ್ತವೆಂದು ಪರಿಗಣಿಸಿ ಶಿಸ್ತು ಪ್ರಾಧಿಕಾರವು ಅಮಾನತು ಆದೇಶವನ್ನು ಹೊರಡಿಸಿದೆ.