ಕಾರ್ಕಳ, ಜೂ 07 (DaijiworldNews/SM): ಬೆಳ್ಮಣ್-ಮಂಚಕಲ್ಲು ನಡುವೆ ಹಾದು ಹೋಗಿರುವ ರಸ್ತೆಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರನ ಸಾವಿಗೆ ಕಾರಣನಾದ ಕಾರು ಚಾಲಕ ಮುಂಡ್ಕೂರು ಸಂಕಲ ಕರಿಯದ ನಿವಾಸಿ ಪ್ರಸಾದ್ ಶೆಟ್ಟಿ ತಪಿಸ್ಥನೆಂದು ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶರು ತೀರ್ಪು ನೀಡಿ, ಶಿಕ್ಷೆ ಹೊರಡಿಸಿದ್ದಾರೆ.
2017ರಲ್ಲಿ ಬೆಳ್ಮಣ್ ಗ್ರಾಮದ ಜಂತ್ರ ಎಂಬಲ್ಲಿ ಈ ಅಪಘಾತ ಸಂಭವಿಸದೆ. ಬೆಳ್ಮಣ್ ಕಡೆಯಿಂದ ಮಂಚಕಲ್ಲು ಕಡೆಗೆ ಹೋಗುತ್ತಿದ್ದ ಕಾರು ಎದುರುಗಡೆಯಿಂದ ಬರುತ್ತಿದ್ದ ಬೈಕ್ಗೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಕಾರ್ಕಳ ನಗರದ ಬಂಗ್ಲೆಗುಡ್ಡೆಯ ಉಮ್ಮರ್ ಎಂಬವರ ಮಗ ಪ್ರಕಾಶ್(47) ಎಂಬವರ ತಲೆಭಾಗಕ್ಕೆ ಪೆಟ್ಟು ತಗುಲಿ ಘಟನಾ ಸ್ಥಳದಲ್ಲಿಯೇ ದಾರುಣ ರೀತಿಯಲ್ಲಿ ಮೃತಪಟ್ಟಿದ್ದರು.
ಈ ಕುರಿತು ಅಂದಿನ ಪೊಲೀಸ್ ವೃತ್ತ ನಿರೀಕ್ಷಕ ಜೋಯ್ ಅಂತೋನಿ ಎ ಅವರು ಆರೋಪಿ ಪ್ರಸಾದ್ ಶೆಟ್ಟಿಯ ವಿರುದ್ಧ ನ್ಯಾಯಾಯಲಯಕ್ಕೆ ದೋಷಾರೋಪಣೆ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಆರೋಪಿ ಪ್ರಸಾದ್ ಶೆಟ್ಟಿ ಅಪರಾದಿ ಎಂದು ಘೋಷಿಸಿದೆ. ಭಾರತೀಯ ದಂಡ ಸಂಹಿತೆಯ ಅಡಿಯ ಅಪರಾಧಕ್ಕೆ ರೂ.1000 ದಂಡವನ್ನು ವಿಧಿಸಿ, ದಂಡ ತರಲು ತಪ್ಪಿದಲ್ಲಿ ಒಂದು ತಿಂಗಳ ಸದಾ ಕಾರಾಗೃಹ ವಾಸದ ಶಿಕ್ಷೆಯನ್ನ ಅನುಭವಿಸುವಂತೆ ಮತ್ತು ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಂಬಂಧಿಸಿ 6 ತಿಂಗಳು ಅವಧಿಯ ಸಾದಾ ಕಾರಗೃಹ ವಾಸ ಮತ್ತು ರೂ. 5,000 ದಂಡವನ್ನು ವಿಧಿಸಿ ತೀರ್ಪು ನೀಡಿ, ದಂಡ ತರಲು ತಪ್ಪಿದ್ದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಹೆಚ್ಚುವರಿಯಾಗಿ ಅನುಭವಿಸುವಂತೆ ಆದೇಶ ಮಾಡಿ ತೀರ್ಪು ನೀಡಲಾಗಿದೆ.
ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್. ತೀರ್ಪು ನೀಡಿದ್ದಾರೆ. ಸರಕಾರಿ ಪರ ಅಭಿಯೋಜಕರು ಜಗದೀಶ್ ಜಾಲಿ, ಶೋಭಾ ಮಹಾದೇವ ನಾಯ್ಕ ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ ವಾದ ಮಂಡಿಸಿರುತ್ತಾರೆ.