ಮಂಗಳೂರು, ಜೂ 07 (DaijiworldNews/SM): ಹಿಂದೆ ಎಸ್ಎಸ್ಎಲ್ ಸಿ, ಪಿಯುಸಿ ಫಲಿತಾಂಶ ಬರುವ ವೇಳೆ ಅವಿಭಜಿತ ದ.ಕ.ಜಿಲ್ಲೆ ಮೇಲುಗೈ ಎಂದು ಪತ್ರಿಕೆಯಲ್ಲಿ ಬರುತ್ತಿತ್ತು. ಆದರೆ ಇದೀಗ ವಿದ್ಯಾರ್ಥಿಗಳ ಫಲಿತಾಂಶವು 20ನೇ ಸ್ಥಾನಕ್ಕೆ ಕುಸಿದಿದೆ. ಇದಕ್ಕೆ ವಿದ್ಯಾರ್ಥಿಗಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತಿರುವುದೇ ಕಾರಣ. ಆದ್ದರಿಂದ ಎಲ್ಲರೂ ಎಚ್ಚರವಹಿಸಿ ಮುಂದಕ್ಕೆ ಹೀಗಾಗದಂತೆ ನೋಡಿಕೊಳ್ಳಬೇಕಿದೆ ಎಂದು ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಹೇಳಿದರು.
ದಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ವತಿಯಿಂದ ನಗರದ ಬೋಳಾರದ ಶಾದಿಮಹಲ್ ನಲ್ಲಿ ನಡೆದ ಅಭಿನಂದನೆಯನ್ನು ಸ್ವೀಕರಿಸಿ ಮಾತನಾಡಿದ ಅವರು, ದ.ಕ.ಜಿಲ್ಲೆಯಲ್ಲಿ ನಕಲಿ ದೇಶ ಭಕ್ತರು ದೇಶಭಕ್ತಿಯ ಬಗ್ಗೆ ಮಾತನಾಡುತ್ತಾರೆ. ಕೇವಲ ಒಂದೇ ಧರ್ಮದವರು ಈ ದೇಶಕ್ಕೆ ಕೊಡುಗೆ ಕೊಟ್ಟಿಲ್ಲ. ಸಾವಿತ್ರಿ ಬಾಯಿ ಪುಲೇ, ಫಾತಿಮಾ ಶೇಖ್ ಅವರು ದೇಶದ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಲೆಂದು 18ನೇ ಶತಮಾನದಲ್ಲಿಯೇ ಹೋರಾಟ ಮಾಡಿದ್ದಾರೆ. ಇವರು ಯಾವುದೇ ಆಸೆ-ಆಕಾಂಕ್ಷೆಯನ್ನಿರಿಸಿ, ಧರ್ಮದ ಹೆಸರಿನಲ್ಲಿ ಈ ಹೋರಾಟವನ್ನು ಮಾಡಿಲ್ಲ. ಎಲ್ಲರೂ ಸಾಕ್ಷರತಾರಾಗಬೇಕೆಂದು ಈ ಹೋರಾಟ ಮಾಡಿದ್ದರು. ಇದೀಗ ಈ ದೇಶದಲ್ಲಿ, ರಾಜ್ಯದಲ್ಲಿ ಮಹಿಳೆಯರು ಶಿಕ್ಷಣ ಮುಂದೆ ಬಂದಿದ್ದರೆ ಅದಕ್ಕೆ ಈ ಇಬ್ಬರು ಮಹಿಳೆಯರೇ ಕಾರಣ ಎಂದು ಹೇಳಿದರು.