ಕಾರ್ಕಳ, ಜೂ 07 (DaijiworldNews/DB): ಮಹಾತ್ಮ ಗಾಂಧೀಜಿಯವರ ಹಂತಕ ನಾಥುರಾಮ ಗೋಡ್ಸೆಯ ಹೆಸರಿನಲ್ಲಿ ರಸ್ತೆಗೆ ನಾಮಫಲಕ ಅಳವಡಿಸಿ ಪ್ರಜಾಪ್ರಭುತ್ವದ ರಾಷ್ಟ್ರದ ಸಂವಿಧಾನಕ್ಕೆ ಅಪಮಾನ ಮಾಡಲಾಗಿದೆ. ಗಾಂಧೀಜಿಯವರನ್ನು ಅವಮಾನಿಸಿದ ಆರೋಪಿಗಳನ್ನು ಶೀಘ್ರ ಬಂಧಿಸದೇ ಇದ್ದಲ್ಲಿ ಕಾಂಗ್ರೆಸ್ ಹೋರಾಟವನ್ನು ತೀವ್ರಗೊಳಿಸಲಿದೆ ಎಂದು ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ನ ಮಾಜಿ ಅಧ್ಯಕ್ಷೆ ಮಮತಾ ಗಟ್ಟಿ ಹೇಳಿದ್ದಾರೆ.
ಕಾರ್ಕಳ ಕಾಂಗ್ರೆಸ್ ಕಚೇರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯತ್ನಿಂದ ರಾಷ್ಟ್ರ ಮಟ್ಟವರೆಗೆ ಬಿಜೆಪಿ ಅಧಿಕಾರ ನಡೆಸುತ್ತಿದ್ದರೂ, ನೈಜ ಆರೋಪಿಗಳನ್ನು ಬಂಧಿಸುವಲ್ಲಿ 3 ದಿನಗಳು ಕಳೆದರೂ ಇನ್ನೂ ಅಸಾಧ್ಯವಾಗಿಲ್ಲ. ಇದು ಸರಕಾರದ ಆಡಳಿತ ವೈಫಲ್ಯವೆಂದು ಎಂದು ಆಪಾದಿಸಿದರು.
ಮಹತ್ಮಾಗಾಂಧೀಜಿಯ ಆದರ್ಶ ಸರಳತೆ ಅಹಿಂಸಾಮಾರ್ಗ ಜಗತ್ತಿಗೆ ಪ್ರೇರಣಾಶಕ್ತಿಯಾಗಿದೆ. ವಿಶ್ವದ ಐವತ್ತು ದೇಶಗಳಲ್ಲಿ ಗಾಂಧಿಜಿಯವರನ್ನು ಪೂಜ್ಯಭಾವದಿಂದ ಗೌರವಿಸಲಾಗುತ್ತಿದೆ. ಸ್ವಾತಂತ್ರ್ಯ ಭಾರತಕ್ಕಾಗಿ ಹೋರಾಟ ನಡೆಸಿ ಜೀವ ತ್ಯಾಗ ಮಾಡಿದವರನ್ನು ಅವಮಾನಿಸುವುದು ತರವಲ್ಲ. ಸಚಿವ ವಿ. ಸುನೀಲ್ಕುಮಾರ್ ಅವರು ಪ್ರತಿನಿಧಿಸುತ್ತಿರುವ ಕಾರ್ಕಳ ಕ್ಷೇತ್ರದಲ್ಲಿ ಈ ಕೃತ್ಯ ನಡೆದಿರುವಾಗ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸದೇ ಇರುವುದು ಖೇದಕರ. ಸಚಿವನಾಗಿ ಮುಂದುವರಿಯುವುದಕ್ಕೆ ಸುನೀಲ್ಕುಮಾರ್ ಅನರ್ಹ ಎಂದರು.
ಒಂದು ಸಣ್ಣ ಗ್ರಾಮ ಪಂಚಾಯತ್ನಲ್ಲಿ ಗಂಭೀರ ವಿಚಾರ ಭಾಗಿಯಾಗಿರುವ ಕಿಡಿಗೇಡಿಯ ಬಂಧಿಸಲು ಪೊಲೀಸರಿಗೆ ಅಸಾಧ್ಯವಾಗಿದೆ ಎಂದರೆ ಅದು ಸರಕಾರದ ಆಡಳಿ ವೈಫಲ್ಯ ಎದ್ದು ತೋರುತ್ತಿದೆ. ಇದು ಸಚಿವ ಸುನೀಲ್ಕುಮಾರ್ ಅವರ ಪ್ರೇಶ ಪ್ರೇಮದ ಸಂಕೇತವೇ ಎಂದು ಪ್ರಶ್ನಿಸಿರುವ ಮಮತಾ ಗಟ್ಟಿ, ಪ್ರಕರಣದ ಕುರಿತು ಯಾರ್ಯಾರ ಮೇಲೆ ಗೂಬೆ ಕೂರಿಸುವ ಬದಲಾಗಿ ನೈಜ ಆರೋಪಿಯನ್ನು ಪತ್ತೆ ಹಚ್ಚುವ ಪ್ರಯತ್ನ ನಡೆಸುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ನಿರ್ದೇಶನ ನೀಡುವ ಪ್ರಯತ್ನವನ್ನು ಸಚಿವ ಸುನೀಲ್ಕುಮಾರ್ ಮಾಡಲಿ ಎಂದರು.
ಬೋಳ ಗ್ರಾಮ ಪಂಚಾಯತ್ನಲ್ಲಿ ದೇಶ ದ್ರೋಹಕೃತ್ಯ ನಡೆದಿರುವಾಗ ಮೌನಕ್ಕೆ ಶರಣಾಗಿರುವ ಜಿಲ್ಲಾಡಳಿತ, ಯುವ ಕಾಂಗ್ರೆಸ್ ಕಾರ್ಯಕರ್ತರು ಬೀದಿಗೆ ಇಳಿದು ಹೋರಾಟದ ಹಾದಿ ತುಳಿಯುತ್ತಿರುವ ಮಾಹಿತಿ ಪಡೆದ ಜಿಲ್ಲಾಡಳಿತವು ನಾಥುರಾಮ್ ಗೋಡ್ಸೆಯ ನಾಮಫಲಕವನ್ನು ತೆರವುಗೊಳಿಸಲು ಮುಂದಾಗಿದೆಯೇ ಹೊರತು ಸಚಿವ ಸುನೀಲ್ಕುಮಾರ್ ಅವರ ಅದೇಶದಿಂದ ಅಲ್ಲ ಎಂದು ಇದೇ ಸಂದರ್ಭದಲ್ಲಿ ಮಮತಾ ಗಟ್ಟಿ ಸ್ಟಷ್ಟಪಡಿಸಿದರು.
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸದಾಶಿವ ದೇವಾಡಿಗ, ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ ಪೂಜಾರಿ, ಜಿಲ್ಲಾ ಬಿಪಿನಚಂದ್ರಪಾಲ್ ನಕ್ರೆ, ತಾಲೂಕು ವಕ್ತಾರ ಶುಭದ ರಾವ್ ನಿಕಟಪೂರ್ವ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸುಧಾಕರ್ ಕೋಟ್ಯಾನ್, ಮಹಿಳಾ ಘಟಕದ ರಾಜ್ಯ ಕಾರ್ಯದರ್ಶಿ ಮಲ್ಲಿಕಾ ಪಕ್ಕಲ, ತಾಲೂಕು ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಜನಿ ಹೆಬ್ಬಾರ್, ಜಾರ್ಜ್ ಕ್ಯಾಸ್ತೋಲಿನೋ, ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಇನ್ನಾ, ಪುರಸಭಾ ಸದಸ್ಯ ಸೋಮನಾಥ ನಾಯ್ಕ್, ಕಾಂಗ್ರೆಸ್ ಮುಖಂಡರಾದ ಪ್ರಭಾಕರ್ ಬಂಗೇರಾ, ರವಿಶಂಕರ್ ಶೇರಿಗಾರ್, ಶುಭದ ಆಳ್ವಾ, ಶೋಭಾ, ಸುನೀಲ್ ಭಂಡಾರಿ, ಥೋಮಸ್ ಮಸ್ಕರೇನ್ಹಸ್, ಶಿರಿಯಣ್ಣ ಶೆಟ್ಟಿ, ಮಾಲಿನಿ ರೈ ಮೊದಲಾದವರು ಉಪಸ್ಥಿತರಿದ್ದರು.
ಬಳಿಕ ಬೋಳ ಗ್ರಾಮ ಪಂಚಾಯತ್ ವ್ಯಾಪ್ತಿಯ ರಸ್ತೆಗೆ ರಾಷ್ಟ್ರವಿರೋಧಿ ನಾಥುರಾಮ ಗೋಡ್ಸೆಯ ನಾಮಫಲಕ ಅಳವಡಿಸಿದ ಆರೋಪಿಗಳ ಪತ್ತೆಗೆ ಅಗ್ರಹಿಸಿ ಕಾರ್ಕಳ ಡಿವೈಎಸ್ಪಿ ವಿನಯಪ್ರಸಾದ್ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಮುಖಂಡರು ಹಾಗೂ ಕಾರ್ಯಕರ್ತರು ಮನವಿ ಸಲ್ಲಿಸಿದರು.