ಕಾಸರಗೋಡು, ಜೂ 07 (DaijiworldNews/DB): ನಾಮಪತ್ರ ಹಿಂದಕ್ಕೆ ಪಡೆಯಲು ಲಂಚ ನೀಡಿದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಬಿಜೆಪಿ ಕೇರಳ ಘಟಕ ಅಧ್ಯಕ್ಷ ಕೆ. ಸುರೇಂದ್ರನ್ ವಿರುದ್ಧ ಕ್ರೈಂ ಬ್ರಾಂಚ್ ಪೊಲೀಸರು ಜಾಮೀನು ರಹಿತ ಮೊಕದ್ದಮೆ ಹೂಡಿದ್ದಾರೆ.
ಪರಿಶಿಷ್ಟ ಜಾತಿ - ಪಂಗಡದ ಅತಿಕ್ರಮ ತಡೆ ಕಾಯ್ದೆಯಡಿ ಮೊಕದ್ದಮೆ ಹೂಡಲಾಗಿದ್ದು, ಸುರೇಂದ್ರನ್ ಸೇರಿದಂತೆ ಆರು ಮಂದಿ ಈ ಪ್ರಕರಣದಲ್ಲಿ ಆರೋಪಿಗಳಾಗಿದ್ದಾರೆ. ಕಾಸರಗೋಡು ಹೆಚ್ಚುವರಿ ಪ್ರಥಮ ದರ್ಜೆ ನ್ಯಾಯಾಲಯದಲ್ಲಿ ಕ್ರೈಂ ಬ್ರಾಂಚ್ ಮಧ್ಯಂತರ ವರದಿ ಸಲ್ಲಿಸಿದ್ದು, ಈ ವರದಿಯಲ್ಲಿ ಸುರೇಂದ್ರನ್ ವಿರುದ್ಧ ಹೊಸ ಮೊಕದ್ದಮೆ ಸೇರಿಸಲಾಗಿದೆ.
2021ರ ಏಪ್ರಿಲ್ನಲ್ಲಿ ನಡೆದ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಮಂಜೇಶ್ವರದಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ಕೆ. ಸುರೇಂದ್ರನ್ ಬಿಎಸ್ಪಿ ಅಭ್ಯರ್ಥಿಯಾಗಿದ್ದ ಕೆ. ಸುಂದರರಿಂದ ನಾಮಪತ್ರ ಹಿಂದಕ್ಕೆ ಪಡೆಯಲು ಎರಡೂವರೆ ಲಕ್ಷ ರೂ. ಹಾಗೂ ಸ್ಮಾರ್ಟ್ ಫೋನ್ ನೀಡಿದ್ದು, ಇದಲ್ಲದೆ ನಾಮಪತ್ರ ಹಿಂಪಡೆಯಲು ಬೆದರಿಕೆಯೊಡ್ಡಿರುವುದಾಗಿ ಪ್ರಕರಣ ದಾಖಲಿಸಲಾಗಿತ್ತು. ಇದಲ್ಲದೆ ದಿಗ್ಬಂಧನ, ಸಾಕ್ಷ್ಯ ನಾಶ ಮೊದಲಾದ ಮೊಕದ್ದಮೆಗಳನ್ನು ದಾಖಲಿಸಲಾಗಿತ್ತು.
ಇದೀಗ ಹೆಚ್ಚುವರಿ ಮೊಕದ್ದಮೆ ದಾಖಲಿಸಿರುವುದು ಪ್ರಕರಣ ಇನ್ನಷ್ಟು ಪ್ರಾಧಾನ್ಯತೆ ಪಡೆದುಕೊಳ್ಳುವಂತೆ ಮಾಡಿದೆ. ಪ್ರಕರಣ ದಾಖಲಿಸಿ ಒಂದು ವರ್ಷದ ಬಳಿಕ ಕ್ರೈಂ ಬ್ರಾಂಚ್ ಮಧ್ಯಂತರ ವರದಿ ನೀಡಿದೆ.