ಕಾಸರಗೋಡು, ಜೂ 07 (DaijiworldNews/DB): ಮೂವರು ವ್ಯಕ್ತಿಗಳು ಬಿಎಸೆನ್ನೆಲ್ ಕಾರ್ಮಿಕರ ಸೋಗಿನಲ್ಲಿ ಬಂದು ಕೇಬಲ್ ಕಳವು ಮಾಡಿದ ಘಟನೆಗೆ ಸಂಬಂಧಪಟ್ಟಂತೆ ಓರ್ವನನ್ನು ಕಾಸರಗೋಡು ಪೊಲೀಸರು ಬಂಧಿಸಿದ್ದಾರೆ.
ಮಂಜೇಶ್ವರ ಉದ್ಯಾವರದ ಅಬ್ದುಲ್ ಹ್ಯಾರಿಸ್ ಪಿ . ( 35) ಬಂಧಿತ ಆರೋಪಿ . ಪ್ರಕರಣದಲ್ಲಿ ಶಾಮೀಲಾಗಿದ್ದ ಇನ್ನಿಬ್ಬರಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ.
ಕಾಸರಗೋಡು ಅಣಂಗೂರು ರಸ್ತೆಯಲ್ಲಿ ಬಿಎಸೆನ್ನೆಲ್ ಹೊಸ ಕೇಬಲ್ ಅಳವಡಿಸಲಾಗುತ್ತಿದ್ದು, ಈ ಕೇಬಲ್ನ ಸುಮಾರು 160 ಮೀಟರ್ಗಳಷ್ಟು ಕೇಬಲ್ನ್ನು ಆರೋಪಿಗಳು ಕಳವು ಮಾಡಿರುವುದಾಗಿ ಬಿಎಸೆನ್ನೆಲ್ ಅಧಿಕಾರಿಗಳು ದೂರು ನೀಡಿದ್ದರು. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರು ಸಿಸಿ ಟಿವಿ ದೃಶ್ಯಗಳನ್ನು ಪರಿಶೀಲನೆ ನಡೆಸಿದಾಗ ಬಿಎಸೆನ್ನೆಲ್ ಕಾರ್ಮಿಕರಂತೆ ವಸ್ತ್ರ ಹಾಗೂ ಹೆಲ್ಮೆಟ್ ಧರಿಸಿ ಬಂದ ಮೂವರು ಆಟೋ ರಿಕ್ಷಾದಲ್ಲಿ ಕೇಬಲ್ನ್ನು ಸಾಗಿಸುತ್ತಿರುವುದು ಪತ್ತೆಯಾಗಿದೆ. ಬಳಿಕ ಆಟೋ ರಿಕ್ಷಾ ನಂಬ್ರವನ್ನು ಕೇಂದ್ರೀಕರಿಸಿ ತನಿಖೆ ನಡೆಸಿದಾಗ ಆರೋಪಿಗಳ ಗುರುತು ಪತ್ತೆಯಾಗಿದ್ದು, ಆಟೋವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಕಳವುಗೈದ ಮಾಲನ್ನು ಕುಂಬಳೆಯ ಗುಜರಿ ವ್ಯಾಪಾರಿಗೆ ಮಾರಾಟ ಮಾಡಿದ್ದಾಗಿ ಬಂಧಿತ ಆರೋಪಿ ತಿಳಿಸಿದ್ದಾನೆ. ಸುಮಾರು 1. 45 ಲಕ್ಷ ರೂ. ಮೌಲ್ಯದ ಕೇಬಲನ್ನು ಆರೋಪಿಗಳು ಕೇವಲ 15 ಸಾವಿರ ರೂ.ಗೆ ಮಾಡಿದ್ದಾಗಿ ಪೊಲೀಸರು ತಿಳಿಸಿದ್ದಾರೆ.