ಮಂಗಳೂರು, ಜೂ. 07 (DaijiworldNews/DB): ಹಂಪನಕಟ್ಟೆ ವಿವಿ ಕಾಲೇಜಿನಲ್ಲಿ ಹಿಜಾಬ್ ನಿಷೇಧಿಸಿದ್ದನ್ನು ವಿರೋಧಿಸಿ ಸುದ್ದಿಗೋಷ್ಠಿ ನಡೆಸಿದ್ದ ವಿದ್ಯಾರ್ಥಿನಿಯರು ಸೇರಿದಂತೆ ನಿಯಮ ಉಲ್ಲಂಘಿಸಿದವರಿಗೆ ಕಾಲೇಜು ಪ್ರಾಂಶುಪಾಲರು ನೊಟೀಸ್ ಜಾರಿ ಮಾಡಿದ್ದಾರೆ. ಅಲ್ಲದೆ ಮುಂದೆ ಇಂತಹ ಘಟನೆ ನಡೆದಲ್ಲಿ ಕಾಲೇಜಿನಿಂದ ಅಮಾನತು ಮಾಡಲಾಗುವುದು ಎಂದು ಸೂಚಿಸಿದ್ದಾರೆ.
ಕಾಲೇಜಿನಲ್ಲಿ ಹಿಜಾಬ್ ಧರಿಸಲು ಅವಕಾಶ ನೀಡದಿರುವ ಕಾಲೇಜು ಆಡಳಿತ ಮಂಡಳಿ ನಿರ್ಣಯದ ವಿರುದ್ದ ಜೂನ್ 4ರಂದು ಆರು ಮಂದಿ ವಿದ್ಯಾರ್ಥಿನಿಯರು ಸುದ್ದಿಗೋಷ್ಠಿ ನಡೆಸಿದ್ದರು. ಅಲ್ಲದೆ ಎಬಿವಿಪಿ ಒತ್ತಡಕ್ಕೆ ಮಣಿದು ಕಾಲೇಜು ಆಡಳಿತ ಮಂಡಳಿಯು ಈ ನಿರ್ಧಾರ ಕೈಗೊಂಡಿದೆ ಎಂದು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕಾಲೇಜು ಪ್ರಾಂಶುಪಾಲೆ ಡಾ. ಅನಸೂಯಾ ರೈ ಅವರು ವಿದ್ಯಾರ್ಥಿನಿಯರಿಗೆ ನೊಟೀಸ್ ನೀಡಿದ್ದು, ಬಾಹ್ಯ ವ್ಯಕ್ತಿಗಳ ಬೆಂಬಲದಿಂದ ಸುದ್ದಿಗೋಷ್ಠಿ ನಡೆಸಿದ್ದರಿಂದ ಕಾಲೇಜು ಮತ್ತು ಪ್ರಾಂಶುಪಾಲರ ಘನತೆಗೆ ಧಕ್ಕೆಯಾಗಿದೆ. ಈ ಕಾರಣಕ್ಕಾಗಿ ನಿಮ್ಮ ವಿರುದ್ದ ಯಾಕೆ ಶಿಸ್ತು ಕ್ರಮ ತೆಗೆದುಕೊಳ್ಳಬಾರದು ಎಂದು ಪ್ರಶ್ನಿಸಿದ್ದಾರೆ. ಅಲ್ಲದೆ ಮೂರು ದಿನಗಳೊಳಗೆ ಸೂಕ್ತ ಉತ್ತರ ನೀಡುವಂತೆ ನೊಟೀಸ್ನಲ್ಲಿ ತಿಳಿಸಲಾಗಿದೆ.
ಗೌಸಿಯಾ ಸೇರಿದಂತೆ ತರಗತಿಯೊಳಗೆ ಹಿಜಾಬ್ ಧರಿಸಿ ನಿಯಮ ಉಲ್ಲಂಘನೆ ಮಾಡಿದ ಎಲ್ಲಾ ಮುಸ್ಲಿಂ ವಿದ್ಯಾರ್ಥಿನಿಯರಿಗೂ ನೊಟೀಸ್ ನೀಡಲಾಗಿದೆ. ಮುಂದೆ ಇಂತಹ ಘಟನೆ ಮರುಕಳಿಸಿದ್ದಲ್ಲಿ ಕಾಲೇಜಿನಿಂದ ಅಮಾನತು ಮಾಡಲಾಗುವುದು ಎಂದು ನೊಟೀಸ್ನಲ್ಲಿ ಸೂಚನೆ ನೀಡಲಾಗಿದೆ.