ಕಾರ್ಕಳ,ಜೂ 07(DaijiworldNews/MS): ಪಡುಬಿದ್ರಿ- ಕಾರ್ಕಳ ನಡುವೆ ಹಾದು ಹೋಗಿರುವ ರಾಜ್ಯ ಹೆದ್ದಾರಿಯ ನಿಟ್ಟೆ ಅತ್ತೂರು ಕ್ರಾಸ್ ಎಂಬಲ್ಲಿ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮವಾಗಿ ಬೈಕ್ವೊಂದರ ಸಹಸವಾರಿ ಸಾವಿಗೀಡಾದ ಘಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಸ್ಸು ಚಾಲಕ ಚಿಕ್ಕಮಗಳೂರಿನ ಮೂಡಿಗೆರೆಯ ಕಳಸ ಮಾವಿನಕೆರೆಯ ಹರೀಶ್ ಯಾನೆ ಬಿ.ರಾಮಚಂದ್ರ ಅಪರಾಧಿ ಎಂದು ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ತೀರ್ಪು ನೀಡಿ ಶಿಕ್ಷೆ ಹೊರಡಿಸಿದೆ.
2016 ಜನವರಿ 13 ರ ಸಂಜೆ 4.15ರ ವೇಳೆಗೆ ಈ ಘಟನೆ ಸಂಭವಿಸಿದೆ. ಕೆಎ.18.ಬಿ.8566 ನಂಬ್ರದ ಬಸ್ಸಿನ ಚಾಲಕನಾಗಿ ದುಡಿದಿದ್ದ ಹರೀಶ್ ಯಾನೆ ಬಿ.ರಾಮಚಂದ್ರ (39) ಪ್ರಕರಣದಲ್ಲಿ ಅಪರಾಧಿ ಎಂದು ಪ್ರಕರಣದ ವಿಚಾರಣೆ ನಡೆಸಿದ ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ನ್ಯಾಯಾಧೀಶೆ ಚೇತನಾ ಎಸ್.ಎಫ್ ತೀರ್ಪು ನೀಡಿದ್ದಾರೆ.
ನಿಟ್ಟೆ ಗ್ರಾಮದ ಅತ್ತೂರು ಚರ್ಚ್ ಕ್ರಾಸ್ ಬಳಿ ರಾಜ್ಯ ಹೆದ್ದಾರಿಯಲ್ಲಿ ಪಡುಬಿದ್ರೆ ಕಡೆಯಿಂದ ಕಾರ್ಕಳ ಕಡೆಗೆ ಅತೀವೇಗ ಹಾಗೂ ಅಜಾಗರೂಕತೆಯಿಂದ ರಸ್ತೆಯ ತೀರಾ ಬಲಬದಿಗೆ ಚಲಾಯಿಸಿಕೊಂಡು ಬಂದು ಅತ್ತೂರು ಚರ್ಚ್ ಕ್ರಾಸ್ ಹತ್ತಿರ ರಾಜ್ಯ ಹೆದ್ದಾರಿಯಲ್ಲಿ ಪಡುಬಿದ್ರೆ ಕಡೆಗೆ ಹೋಗುತ್ತಿದ್ದ ಕೆಎ 20-ಎಜೆ-4309 ನಂಬ್ರದ ದ್ವಿಚಕ್ರ ವಾಹನಕ್ಕೆ ಡಿಕ್ಕಿ ಹೊಡೆದಿತ್ತು. ಪರಿಣಾಮವಾಗಿ ಸವಾರ ಶಿರ್ವ ಕಲ್ಲೊಟ್ಟು ಅನಂತ ಪ್ರಭು (43) ಗಾಯಗೊಂಡಿದ್ದರು. ಸಹಸವಾರಿ ಶಿರ್ವ ಸೊರ್ಪ ಹೌಸ್ನ ಮೇರಿ ಸಲ್ದಾನಾ(58) ತಲೆಗೆ ಗಂಭೀರ ಸ್ವರೂಪದ ಗಾಯಗಳು ಉಂಟಾಗಿ ಮಣಿಪಾಲ ಕೆ.ಎಂ.ಸಿ. ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ 2016 ಜನವರಿ 13ರಂದು ಮೃತಪಟ್ಟಿರುತ್ತಾರೆ.
ಈ ಕುರಿತು ಅಂದು ಆಗಿನ ಪೊಲೀಸ್ ವೃತ್ತ ನಿರೀಕ್ಷಕರಾಗಿದ್ದ ಜೆ.ಎಂ. ನಾಯ್ಕ ಅವರು ಆರೋಪಿಯ ವಿರುದ್ಧ ನ್ಯಾಯಾಲಯಕ್ಕೆ ದೋಷಾರೋಪಣಾ ಪಟ್ಟಿಯನ್ನು ಸಲ್ಲಿಸಿದ್ದರು.ಸದ್ರಿ ಪ್ರಕರಣದಲ್ಲಿ ಸರಕಾರದ ಪರ ಸಹಾಯಕ ಸರಕಾರಿ ಅಭಿಯೋಜಕಿ ಶೋಭಾ ಮಹಾದೇವ ನಾಯ್ಕ ಇವರು ಪ್ರಕರಣದ ಸಾಕ್ಷಿದಾರರ ವಿಚಾರಣೆ ನಡೆಸಿ, ವಾದ ಮಂಡಿಸಿರುತ್ತಾರೆ. ಕಾರ್ಕಳ 2ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಧೀಶೆ ಚೇತನಾ ಎಸ್.ಎಫ್ ಅವರು ಆರೋಪಿಯ ವಿರುದ್ಧದ ಪ್ರಕರಣವು ಸಾಭೀತು ಆಗಿದೆ ಎಂದು ಅಭಿಪ್ರಾಯಪಟ್ಟು ಆರೋಪಿ ಹರೀಶ ಯಾನೆ ಬಿ ರಾಮಚಂದ್ರ ಇವನನ್ನು ಅಪರಾಧಿ ಎಂದು ಘೋಷಿಸಿ ಕಲಂ.279 ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಂಬಂಧಿಸಿ ರೂ.1000 ದಂಡವನ್ನು ವಿಧಿಸಿದ್ದಾರೆ.
ದಂಡ ತೆರಲು ತಪ್ಪಿದಲ್ಲಿ 1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ, ಕಲಂ.337 ಭಾರತೀಯ ದಂಡ ಸಂಹಿತ ಅಡಿಯ ಅಪರಾಧಕ್ಕೆ ಸಂಬಂಧಿಸಿ ರೂ.500ದಂಡವನ್ನು ವಿಧಿಸಿದ್ದಾರೆ. ದಂಡ ತರಲು ತಪ್ಪಿದಲ್ಲಿ 15 ದಿನಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ, ಕಲಂ.338 ಭಾರತೀಯ ದಂಡ ಸಂಹಿತ ಅಡಿಯ ಅಪರಾಧಕ್ಕೆ ಸಂಬಂಧಿಸಿ ರೂ.1000 ದಂಡವನ್ನು ವಿಧಿಸಿದ್ದಾರೆ. ದಂಡ ತೆರಲು ತಪ್ಪಿದಲ್ಲಿ 4 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಮತ್ತು ಕಲಂ.304(ಎ) ಭಾರತೀಯ ದಂಡ ಸಂಹಿತೆ ಅಡಿಯ ಅಪರಾಧಕ್ಕೆ ಸಂಬಂಧಿಸಿ 6 ತಿಂಗಳು ಅವಧಿಯ ಸಾದಾ ಕಾರಗೃಹ ವಾಸ ಅನುಭವಿಸುವಂತೆ ಮತ್ತು ಕಲಂ.434(ಬಿ) ಭಾರತೀಯ ಮೋಟಾರು ವಾಹನ ಕಾಯ್ದೆಯ ಉಲ್ಲಂಘನೆ ಮಾಡಿ ’ಎಸಗಿರುವ ಸದ್ರಿ ಕಾಯ್ದೆಯ ಕಲಂ.187ರ ರೀತ್ಯಾ ಶಿಕ್ಷಿಸಲ್ಪಡುವ ಅಪರಾಧಕ್ಕೆ ಸಂಬಂಧಿಸಿ ಆರೋಪಿಗೆ ರೂ.5,000 ದಂಡ ವಿಧಿಸಿ - ದಂಡ ವಿಧಿಸಿದ್ದಾರೆ. ದಂಡ ತೆರಲು ತಪ್ಪಿದ್ದಲ್ಲಿ1 ತಿಂಗಳ ಸಾದಾ ಕಾರಾಗೃಹ ವಾಸದ ಶಿಕ್ಷೆಯನ್ನು ಅನುಭವಿಸುವಂತೆ ಆದೇಶ ಮಾಡಿ ತೀರ್ಪು ನೀಡಿರುತ್ತಾರೆ.