ಪುಂಜಾಲಕಟ್ಟೆ, ಜೂ. 07 (DaijiworldNews/DB): ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪಿಯನ್ನು ಪುಂಜಾಲಕಟ್ಟೆ ಪೊಲೀಸರು ಉಳಿ ಗ್ರಾಮದಲ್ಲಿ ಬಂಧಿಸಿದ್ದಾರೆ. ಆರೋಪಿಯಿಂದ ಜಾನುವಾರು ಮತ್ತು ಸಾಗಾಟಕ್ಕೆ ಬಳಕೆ ಮಾಡಿದ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ಬಂಧಿತ ಆರೋಪಿಯನ್ನು ಉಳಿ ಗ್ರಾಮದ ಕಕ್ಯೆಪದವು ಮಹಮ್ಮದ್ ರಫೀಕ್ (34) ಎಂದು ಗುರುತಿಸಲಾಗಿದೆ.
ದೇವಸ್ಯಮುಡೂರು ಕಡೆಯಿಂದ ಕಕ್ಯೆಪದವು ಕಡೆಗೆ ನಸು ನೀಲಿ ಬಣ್ಣದ ಮಹೀಂದ್ರ ಜೀತೋ ವಾಹನದಲ್ಲಿ ಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರು ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ರೌಂಡ್ಸ್ ಕರ್ತವ್ಯದಲ್ಲಿದ್ದ ಪುಂಜಾಲಕಟ್ಟೆಪೊಲೀಸ್ ಠಾಣಾ ಪಿಎಸ್ಐ ಸುತೇಶ್ ಕೆ.ಪಿ. ಮತ್ತು ಸಿಬಂದಿ ಕಾರ್ಯಾಚರಣೆಗಿಳಿದಿದ್ದರು. ಈ ವೇಳೆ ಕಕ್ಯೆಪದವು ಕಡೆಯಿಂದ ಬಂಟ್ವಾಳದುಳಿ ಗ್ರಾಮದ ಶ್ರಈ ಗೋಪಾಲಕೃಷ್ಣ ದೇವಸ್ಥಾನದ ಬಳಿ ಬೆಳಗ್ಗೆ ಸುಮಾರು 10.30 ರ ವೇಳೆಗೆ ವಾಹನವನ್ನು ಪೊಲೀಸರು ತಡೆದು ನಿಲ್ಲಿಸಿ ಪರಿಶೀಲಿಸಿದ್ದಾರೆ.ಈ ವೇಳೆ ಅಕ್ರಮವಾಗಿ ದನಗಳನ್ನು ಹಿಂಸಾತ್ಮಕ ರೀತಿಯಲ್ಲಿ ಸಾಗಾಟ ಮಾಡುತ್ತಿರುವುದು ಕಂಡು ಬಂದಿದೆ. ಆರೋಪಿ ತತ್ಕ್ಷಣ ವಾಹನದಿಂದ ಇಳಿದು ಪರಾರಿಯಾಗಲು ಯತ್ನಿಸಿದ್ದ. ಆತನ ಬಳಿ ಯಾವುದೇ ದಾಖಲೆಗಳು ಇಲ್ಲದ ಕಾರಣ ಪೊಲೀಸರು ಆತನನ್ನು ವಶಕ್ಕೆ ಪಡೆದುಕೊಂಡರು. ಅಲ್ಲದೆ ಪಂಚರ ಸಮಕ್ಷಮ ವಾಹನ ಹಾಗೂ ಕಪ್ಪು ಮತ್ತು ಕಂದು ಬಣ್ಣದ ದನವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ. ಸ್ವಾಧೀಪಡಿಸಿಕೊಂಡ ದನದ ಅಂದಾಜು ಮೌಲ್ಯ 3000 ರೂ. ಮತ್ತು ವಾಹನದ ಅಂದಾಜು ಮೌಲ್ಯ 100000 ರೂ. ಆಗಬಹುದು ಎಂದು ಪೊಲೀಸರು ತಿಳಿಸಿದ್ದಾರೆ.