ಮಂಗಳೂರು, ಜೂ 07(DaijiworldNews/MS): ಪರಿಸರ ಸಂರಕ್ಷಣೆಯ ಜವಬ್ದಾರಿ ಮನೆಯಿಂದಲೇ ಆರಂಭವಾಗಬೇಕು, ಸ್ವಚ್ಛತೆಯ ಬಗ್ಗೆ ವಿದ್ಯಾರ್ಥಿಗಳು ಸುತ್ತಮುತ್ತಲಿನವರಿಗೆ ಜಾಗೃತಿ ಮೂಡಿಸುವಂತೆ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶ್ರೀಮತಿ ಶೋಭ ಬಿ.ಜಿ ಅವರು ಕರೆ ನೀಡಿದರು.
ಅವರು ಜೂ.6ರ ಸೋಮವಾರ ಸುರತ್ಕಲ್ ಗೋವಿಂದಾಸ್ ಪದವಿ ಪೂರ್ವ ಕಾಲೇಜಿನಲ್ಲಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಮಂಗಳೂರಿನ ಗೊವಿಂದಾಸ್ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾಗಿದ್ದ ವಿಶ್ವ ಪರಿಸರ ದಿನಾಚರಣೆ-2022 ಅನ್ನು ಉದ್ಘಾಟಿಸಿ ಮಾತನಾಡಿದರು.
ಅಭಿವೃಧ್ಧಿ ಮತ್ತು ವಿನಾಶ ಒಟ್ಟಿಗೆ ಸಾಗಬಾರದು, ಇರುವ ಒಂದೇ ಭೂಮಿಯನ್ನು ರಕ್ಷಿಸಲು ಸರ್ಕಾರ ಮಾಡಿದ ಸುರಕ್ಷತಾ ಕಾನೂನುಗಳನ್ನು ಪಾಲಿಸುವವರೆಗೆ ಯಾವುದೇ ಸಮಸ್ಯೆ ಆಗಲಾರದು, ನಮ್ಮ ನಮ್ಮ ಜವಬ್ದಾರಿಗಳನ್ನು ಅರಿತು ನಡೆದಾಗ ಪರಿಸರ ಸಹ್ಯ ಬಾಳ್ವೆಯನ್ನು ಮುಂದಿನ ಜಾನಾಂಗಕ್ಕೂ ನೀಡಿದಂತಾಗುತ್ತದೆ ಎಂದರು.
ನಿಟ್ಟೆ ಎಜ್ಯುಕೇಶನ್ ಟ್ರಸ್ಟ್ನ ನಿರ್ದೇಶಕ ಪ್ರೊ. ಜಿ. ನಿಕೇತನ್ ಮಾತನಾಡಿ, ಹವಮಾನ ವೈಪರಿತ್ಯದ ಎಲ್ಲರೂ ಜಾಗೃತರಾಗಬೇಕು, ಅತೀಯಾದ ಉಷ್ಣಾಂಶದಿಂದ ಹಲವು ಕಾಯಿಲೆಗಳು ವ್ಯಾಪಿಸುತ್ತಿದ್ದು ನಮಗೆ ಎಚ್ಚರಿಕೆ ನೀಡುತ್ತಿದೆ ಎಂದರು.
ಪರಿಸರ ಅಧಿಕಾರಿ ಕೀರ್ತಿ ಕುಮಾರ್ ಮಾತನಾಡಿ, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯು ಪರಿಸರ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಂಡ ಕ್ರಮಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಒತ್ತು ನೀಡುತ್ತಿದೆ ಎಂದರು.
ಸಿ.ಆರ್.ಝೆಡ್ ಅಧಿಕಾರಿ ಮಹೇಶ್ ಕುಮಾರ್, ಗೋವಿಂದಾಸ್ ಕಾಲೇಜಿನ ಪ್ರಾಂಶುಪಾಲ ಫ್ರೋ.ಕೃಷ್ಣ ಮೂರ್ತಿ, ಪರಿಸರದ ದಿನದ ಪ್ರಯುಕ್ತ ಪ್ರಶಸ್ತಿ ಸ್ವೀಕರಿಸಿದ ಆಮೈ ಮಹಾಲಿಂಗ ನಾಯ್ಕ್ ಮತ್ತು ಉಳ್ಳಾಲದ ಪರಿಸರ ಸ್ನೇಹಿ ಮಾಧವ ಮಾತನಾಡಿದರು.
ಡಾ.ಸ್ಮಿತಾ ಹೆಗ್ಡೆ ವಿಶೇಷ ಉಪನ್ಯಾಸ ನೀಡಿದರು. ಹಿರಿಯ ನಿವೃತ್ತ ವೈಜ್ಞಾನಿಕ ಅಧಿಕಾರಿ ಜಯಪ್ರಕಾಶ್ ಎನ್. ನಾಯಕ್, ಹಿಂದು ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಚ್. ಶ್ರೀರಂಗ, ಸಂಘದ ಉಪಧ್ಯಾಕ್ಷ ವೈ.ಬಿ ರತ್ನಾಕರ್ ರಾವ್, ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಲಕ್ಷ್ಮೀ.ಪಿ, ವಿವಿಧ ವಿಭಾಗದ ಪ್ರಮುಖರು ಕೈಗಾರಿಕೆ ಸಂಸ್ಥೆ ಮಾಲೀಕರು ಮತ್ತು ಪ್ರತಿನಿಧಿಗಳು ಭಾಗವಹಿಸಿದ್ದರು.