ಉಡುಪಿ, ಜ 12(SM): ಮಲೆನಾಡಿನಲ್ಲಿ ಮಂಗನ ಕಾಯಿಲೆ ಕಾಣಿಸಿಕೊಂಡಿದ್ದು, ಪಶ್ಚಿಮಘಟ್ಟದ ತಪ್ಪಲು ಜಿಲ್ಲೆ ಉಡುಪಿಯಲ್ಲೂ ಮಂಗನಕಾಯಿಲೆಯ ಭೀತಿ ಎದುರಾಗಿದೆ. ಈ ಹಿನ್ನೆಲೆ ಉಡುಪಿ ಜಿಲ್ಲೆಯಲ್ಲಿ ಹೈ ಅಲರ್ಟ್ ಘೋಷಿಸಲಾಗಿದೆ.
ಉಡುಪಿ ಜಿಲ್ಲೆಯಲ್ಲಿ ಈಗಾಗಲೇ ಹನ್ನೊಂದು ಮಂಗಗಳು ಸಾವನ್ನಪ್ಪಿವೆ. ಅವುಗಳ ಮರಣೋತ್ತರ ಪರೀಕ್ಷಾ ವರದಿಯನ್ನು ಹೆಚ್ಚಿನ ತಪಾಸಣೆಗೆ ರವಾನಿಸಲಾಗಿದೆ. ಆದರೆ ಉಡುಪಿ ಜಿಲ್ಲೆಯಲ್ಲಿ ಸಾವನ್ನಪ್ಪಿರುವ ಮಂಗಗಳು ಕಾಯಿಲೆಯಿಂದಲೇ ಸಾವನ್ನಪ್ಪಿವೆಯೇ ಎಂಬುವುದು ದೃಢಪಟ್ಟಿಲ್ಲ. ಆದರೆ, ಮಂಗನ ಕಾಯಿಲೆ ಪಕ್ಕದ ಜಿಲ್ಲೆಯಲ್ಲಿ ಕಾಣಿಸಿಕೊಂಡ ಬಳಿಕ ಕೋತಿಗಳು ಸಾವನ್ನಪ್ಪಿರುವುದು ಜನತೆಯಲ್ಲಿ ಆತಂಕವನ್ನುಂಟು ಮಾಡಲು ಕಾರಣವಾಗಿದೆ.
ಇನ್ನು ಹೊರ ಜಿಲ್ಲೆಗಳಲ್ಲಿ ಮಂಗನ ಕಾಯಿಲೆಗೆ ತುತ್ತಾದ ರೋಗಿಗಳಿಗೆ ಉಡುಪಿಯ ಮಣಿಪಾಲದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಯಾವುದೇ ವ್ಯಕ್ತಿಗೂ ಸೋಂಕು ತಗುಲಿಲ್ಲ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ. ರೋಹಿಣಿ ಮಾಹಿತಿ ನೀಡಿದ್ದಾರೆ.
ಆದರೆ, ಜನತೆ ಎಚ್ಚರಿಕೆಯಿಂದಿರುವಂತೆ ಅವರು ತಿಳಿಸಿದ್ದಾರೆ. ಆರೋಗ್ಯದಲ್ಲಿ ಏರುಪೇರು ಉಂಟಾದಾಗ, ಜ್ವರ ಕಂಡು ಬಂದಲ್ಲಿ ತಕ್ಷಣ ವೈದ್ಯರನ್ನು ಸಂಪರ್ಕಿಸಿ ಸೂಕ್ತ ಚಿಕಿತ್ಸೆ ಹಾಗೂ ಸಲಹೆಗಳನ್ನು ಪಡೆಯುವಂತೆ ಅವರು ಸೂಚನೆ ನೀಡಿದ್ದಾರೆ.