ವಿಟ್ಲ, ಜೂ 06 (DaijiworldNews/SM): ಹಿಂದು ಸಮಾಜದ ಮೇಲೆ ಹಲವು ರೀತಿಯ ಸಂಚುಗಳನ್ನು ಮಾಡಲಾಗುತ್ತಿದೆ. ದೇಶದ ಸವಲತ್ತುಗಳು ಬೇಕು, ಸಂವಿಧಾನ ಬೇಡ ಎನ್ನುವ ಕಾರ್ಯವಾಗುತ್ತಿದೆ. ಹಿಂದೂ ಸಮಾಜ ಎಚ್ಚರಗೊಂಡು ಜಾಗೃತವಾಗಬೇಕು ಎಂದು ಕರ್ನಾಟಕ ದಕ್ಷಿಣ ಸಹ ಪ್ರಾಂತ ಸಂಯೋಜಕ ಮುರಳಿಕೃಷ್ಣ ಹಸಂತಡ್ಕ ಹೇಳಿದರು.
ವಿಶ್ವ ಹಿಂದು ಪರಿಷದ್ ಬಜರಂಗದಳ ವಿಟ್ಲ ಪ್ರಖಂಡ ಮತ್ತು ಹಿಂದು ಜಾಲತಾಣ ವೇದಿಕೆ ವಿಟ್ಲ ಆಶ್ರಯದಲ್ಲಿ ನಡೆದ ಲವ್ ಜಿಹಾದ್, ಮತಾಂತರ, ಗೋಹತ್ಯೆ, ಸಾಮಾಜಿಕ ಜಾಲತಾಣಗಳಲ್ಲಿ ಹಿಂದು ನಾಯಕರ ಅವಹೇಳನದ ವಿರುದ್ದ ಜಾಗೃತಿ ಮೂಡಿಸಲು ಬೃಹತ್ ಹಿಂದು ಜಾಗೃತಿ ಸಭೆಯಲ್ಲಿ ಮಾತನಾಡಿದರು.
ಹಿಂದು ಸಮಾಜದ ಜನರ ಮಾನಸಿಕತೆಯಲ್ಲಿ ಪರಿವರ್ತನೆಯಾಗುತ್ತಿದೆ. ಅಲ್ಪಸಂಖ್ಯಾತರ ತುಷ್ಟೀಕರಣಕ್ಕೆ ಪ್ರಯತ್ನಿಸುವ ರಾಜಕೀಯಕ್ಕೆ ಬೆಂಬಲ ನೀಡುವ ಕಾರ್ಯವಾಗಬಾರದು. ಲವ್ ಜಿಹಾದ್ ಗೆ ತಕ್ಕ ಪ್ರತ್ಯುತ್ತರ ನೀಡುವ ಕಾರ್ಯ ಸಮಾಜ ಮಾಡಬೇಕಾತ್ತದೆ ಎಂದು ತಿಳಿಸಿದರು.
ಹಿಂದು ಜಾಗರಣ ವೇದಿಕೆ ಪ್ರಾಂತ ಪ್ರಶಿಕ್ಷಣ್ ಪ್ರಮುಖ್ ರಾಧಾಕೃಷ್ಣ ಅಡ್ಯಂತಾಯ ಮಾತನಾಡಿ ಜಗತ್ತಿನ್ನು ಉಳಿಸಲು ಹಿಂದು ಸಮಾಜ ಶಕ್ತಿಶಾಲಿಯಾಗಬೇಕು ಎಂದರು. ಹಿಂದು ಭಾವನೆ ಹೃದಯದಿಂದ ಬೆಳಗಬೇಕು. ಉತ್ತಮ ಕೆಲಸ ಮಾಡಿದವರನ್ನು ಆದರ್ಶವಾಗಿಟ್ಟುಕೊಳ್ಳಬೇಕು. ಪಿಶಾಚಿಗಳ ಉಚ್ಚಾಟನೆಗೆ ಸರಿಯಾದ ಸಿದ್ಧತೆ ಮಾಡಬೇಕಾಗಿದೆ. ಹಿಂದು ಮಕ್ಕಳಿಗೆ ಸಂಸ್ಕಾರ ನೀಡುವ ಕಾರ್ಯವಾಗಬೇಕು ಎಂದು ತಿಳಿಸಿದರು.
ವಿಶ್ವ ಸಂವಾದ ವಿಭಾಗ ಪ್ರಚಾರ ಪ್ರಮುಖ್ ತನ್ಮಯಿ ಮಾತನಾಡಿ ವಿವಿಧ ರೀತಿಯಲ್ಲಿ ಹಿಂದು ಯುವತಿಯರನ್ನು ಸಿಲುಕಿಹಾಕಿಸುವ ಕಾರ್ಯಮಾಡಲಾಗುತ್ತದೆ. ಜ್ಞಾನದ ಕೇಂದ್ರಗಳ ಮೇಲೆ ದಾಳಿಗಳನ್ನು ಮಾಡಲಾಗುತ್ತಿದೆ. ಹಿಂದುಗಳಿಗೆ ಭಾರತವೊಂದೇ ಮಾತೃಭೂಮಿಯಾಗಿದ್ದು, ಷಡ್ಯಂತ್ರಗಳನ್ನು ನಾವು ಅರಿತುಕೊಂಡು ಎಚ್ಚೆತ್ತುಕೊಳ್ಳಬೇಕು. ಜಾಗೃತ ಸಮಾಜದಿಂದ ಅದ್ಭುತ ದೇಶ ಕಟ್ಟಲು ಸಾಧ್ಯ ಎಂದು ತಿಳಿಸಿದರು.
ವಿಟ್ಲ ಅರಮನೆಯ ಪ್ರತಿನಿಧಿಯಾಗಿ ಜಯರಾಮ ವಿಟ್ಲ, ವಿಶ್ವ ಹಿಂದು ಪರಿಷದ್ ಜಿಲ್ಲಾ ಅಧ್ಯಕ್ಷ ಡಾ. ಕೆ. ಪ್ರಸನ್ನ, ವಿಶ್ವ ಹಿಂದು ಪರಿಷದ್ ವಿಟ್ಲ ಪ್ರಖಂಡ ಅಧ್ಯಕ್ಷ ಪದ್ಮನಾಭ ಕಟ್ಟೆ, ಜಿಲ್ಲಾ ಸಹ ಕಾರ್ಯದರ್ಶಿ ಗೋವರ್ಧನ್, ಹಿಂದೂ ಜಾಗರಣ ವೇದಿಕೆ ಜಿಲ್ಲಾ ಕಾರ್ಯದರ್ಶಿ ನರಸಿಂಹ ಮಾಣಿ ಉಪಸ್ಥಿತರಿದ್ದರು.