ಪುತ್ತೂರು, ಜೂ 06 (DaijiworldNews/SM): ಪುತ್ತೂರಿನ ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿ ಎಂಬಲ್ಲಿ ಚರಣ್ ರಾಜ್ ರೈ ಹತ್ಯೆ ಪ್ರಕರಣ ಸಂಬಂಧ ಪ್ರಮುಖ ಆರೋಪಿಗಳು ಪೊಲೀಸರು ಬಂಧಿಸಿದ್ದಾರೆ. ಪ್ರಮುಖ ಆರೋಪಿಗಳಾದ ಕಿಶೋರ್ ಪೂಜಾರಿ, ರಾಕೇಶ್ ಮಡಿವಾಳ, ರೇಮಂತ್ ಗೌಡ ಬಂಧಿತ ಆರೋಪಿಗಳು.
ಜೂನ್ 4 ರಂದು ಪೆರ್ಲಂಪಾಡಿಯಲ್ಲಿ ಚರಣ್ ರಾಜ್ ನನ್ನು ಕಿಶೋರ್ ಪೂಜಾರಿ ಮತ್ತು ತಂಡ ತಲವಾರು ಮತ್ತು ಕಬ್ಬಿಣದ ರಾಡ್ ನಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದು, ಈ ಸಂಬಂಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಇದೊಂದು ಪೂರ್ವ ದ್ವೇಷದಿಂದ ಮಾಡಿರುವ ಕೊಲೆಯಾಗಿದೆ. ಮೃತ ಚರಣ್ ರಾಜ್ ತನ್ನ ಸಹಚರರೊಂದಿಗೆ ಸೇರಿಕೊಂಡು ಸಂಪ್ಯ ಬಳಿ ಕಾರ್ತಿಕ್ ಮೇರ್ಲ ಎಂಬವರನ್ನು ಕೊಲೆ ಮಾಡಿದ್ದು ಪ್ರಸ್ತುತ ಜಾಮೀನಿನಲ್ಲಿ ಬಿಡುಗಡೆಗೊಂಡು ಪೆರ್ಲಂಪ್ಪಾಡಿಯಲ್ಲಿ ಹೊಸದಾಗಿ ತೆರೆಯಲಿರುವ ಮೆಡಿಕಲ್ ಶಾಪ್ ಕೆಲಸಕ್ಕೆ ಓಡಾಡಿಕೊಂಡಿದ್ದ ವೇಳೆ ಆರೋಪಿಗಳು ಕೊಲೆ ಮಾಡಿದ್ದಾರೆ.
ಕೊಲೆ ಪ್ರಕರಣದಲ್ಲಿ ಭಾಗಿಯಾದ ಆರೋಪಿಗಳ ಪೈಕಿ ನರ್ಮೇಶ್ ರೈ, ನಿತಿಲ್ ಶೆಟ್ಟಿ, ವಿಜೇಶ್ ಎಂಬವರನ್ನು ಜೂನ್ 5 ರಂದು ದಸ್ತಗಿರಿ ಮಾಡಿ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿದ್ದು, ನ್ಯಾಯಾಲಯ ನ್ಯಾಯಾಂಗ ಬಂಧನ ವಿಧಿಸಿದೆ.
ಪ್ರಕರಣದ ಪ್ರಮುಖ ಆರೋಪಿಗಳಾದ ಕಿಶೋರ್ ಪೂಜಾರಿ, ರಾಕೇಶ್ ಮಡಿವಾಳ, ರೇಮಂತ್ ಗೌಡ ಎಂಬವರು ಚರಣ್ ರಾಜ್ ರವರನ್ನು ಕೊಲೆ ಮಾಡಿದ ಬಳಿಕ ಆರೋಪಿ ರೇಮಂತ್ ನ ಬೈಕಿನಲ್ಲಿ ಬೆಳ್ಳಾರೆಯ ನಿಂತಿಕಲ್ಲ್ ಎಂಬಲ್ಲಿಗೆ ಬಂದು ಬೈಕ್ ಅಲ್ಲಿ ಬಿಟ್ಟು ಅಲ್ಲಿಂದ ಆಟೋರಿಕ್ಷಾದಲ್ಲಿ ಬಾಡಿಗೆಗೆ ಗೊತ್ತು ಮಾಡಿಕೊಂಡು ಸುಬ್ರಹ್ಮಣ್ಯಕ್ಕೆ ತೆರಳುತ್ತಾರೆ. ಸುಬ್ರಹ್ಮಣ್ಯದಿಂದ ಬಾಡಿಗೆ ಕಾರಿನಲ್ಲಿ ಬಿಸಿಲೆ ಮಾರ್ಗವಾಗಿ ಸಕಲೇಶಪುರ ತಾಲೂಕಿನ ಹೆತ್ತೂರು ಎಂಬಲ್ಲಿಗೆ ಹೋಗಿದ್ದಾರೆ. ಅಲ್ಲಿ ಇಲ್ಲಿ ಸುತ್ತಾಡಿಕೊಂಡು ಎರಡು ದಿವಸ ಕಳೆದ ನಂತರ ಜೂನ್ 6 ರಂದು ಆರೋಪಿಗಳು ಕಾರನ್ನು ಬಾಡಿಗೆ ಪಡೆದು ಸೋಮವಾರ ಪೇಟೆ ಕಡೆಗೆ ಬರುತ್ತಿದ್ದ ವೇಳೆ ಮಾಹಿತಿ ಬಂದ ಪ್ರಕಾರ ಸುಳ್ಯ ಠಾಣಾ ಪಿಎಸ್ ಐ ದಿಲಿಪ್ ಅವರ ತಂಡ ಆರೋಪಿತರುಗಳನ್ನು ಸೋಮವಾರ ಪೇಟೆಯಲ್ಲಿ ವಶಕ್ಕೆ ಪಡೆದುಕೊಂಡಿದ್ದಾರೆ.