ಮಂಗಳೂರು, ಜೂ 06 (DaijiworldNews/SM): ಹಿಜಾಬ್ ವಿಚಾರದಲ್ಲಿ ವಿದ್ಯಾರ್ಥಿನಿಯರಿಗೆ ಡಿಸಿ, ವಿಸಿ ಬಳಿ ಆಗದೇ ಇದ್ರೆ ಕಾನೂನು ಹೋರಾಟ ಮಾಡಲಿ ಎಂದು ವಿಧಾನಸಭೆ ಪ್ರತಿಪಕ್ಷ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮಾಜದಲ್ಲಿ ಗೊಂದಲ ಸೃಷ್ಟಿಸಬಾರದು, ದೇಶದ ಕಾನೂನು ಗೌರವಿಸಬೇಕು. ರಾಜ್ಯದಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿಗಳಿದ್ದಾರೆ. 10-15 ಮಂದಿಗಾಗಿ ಎಲ್ಲಾ ವಿದ್ಯಾರ್ಥಿಗಳ ಮನಸ್ಸು ಹಾಳು ಮಾಡೋದೇಕೆ? ನಾನು ಈ ದೇಶದ ಕಾನೂನಿಗೆ ಗೌರವವನ್ನು ಕೊಡಬೇಕು ಅಂದಾಗ ಕೋರ್ಟ್ ಗೆ ಹೋಗೋದು, ಬೇಡ ಅಂದಾಗ ಬಿಡೋದು ಸರಿಯಾದ ಕ್ರಮವೇ ಎಂದು ಅವರು ಪ್ರಶ್ನಿಸಿದ್ದಾರೆ.
ಈ ದೇಶದಲ್ಲಿ ಇದ್ದು ಮಾತನಾಡ್ತಾರೆ, ಇವರೆಲ್ಲಾ ವಿದೇಶಕ್ಕೆ ಹೋಗಲಿ. ಪಾಕಿಸ್ತಾನ, ಸೌದಿಗೆ ಹೋಗಿ ಮಾತನಾಡಲಿ, ಅಲ್ಲಿ ಆಗ್ತದಾ ನೋಡುವಾ? ಆಗ ಅವರಿಗೆ ಈ ದೇಶದ ಸೌಂದರ್ಯ, ಸಂಸ್ಕೃತಿ ಚೆನ್ನಾಗಿ ತಿಳಿಯುತ್ತದೆ. ಈ ದೇಶದಲ್ಲಿ ಮಾತನಾಡೋಕೆ ಅವಕಾಶ ಇದೆ, ಅಲ್ಲಿ ಅದೂ ಇಲ್ಲ ಹಾಗಾಗಿ ಈ ದೇಶದ ಕಾನೂನು ಗೌರವಿಸೋ ಕೆಲಸ ಮಾಡಿ ಎಂದು ಹೇಳಿದ್ದಾರೆ.
ಈ ದೇಶದಲ್ಲಿರೋ ಸ್ವಾತಂತ್ರ್ಯ ಬೇರೆಲ್ಲೂ ಇಲ್ಲ. ಹಿಜಾಬ್ ವಿಚಾರದಲ್ಲಿ ದೇಶದ ಕಾನೂನು ಸುವ್ಯವಸ್ಥೆ ನಮಗೆ ಅಗತ್ಯವಿದೆ. ಅದರ ಜೊತೆಗೆ ಹೆಣ್ಮಕ್ಕಳಿಗೆ ಶಿಕ್ಷಣದ ಅಗತ್ಯ ಇದೆ, ಕೊರತೆ ಆಗಬಾರದು. ಆದರೆ ಕಾನೂನು ವ್ಯಾಪ್ತಿಯಲ್ಲೇ ನಾವು ಅವರಿಗೆ ನೆರವು ನೀಡಬಹುದು. ಅದು ಬಿಟ್ಟು ಕಾನೂನಿನ ಹೊರಗೆ ಬಂದು ಸಮಸ್ಯೆ ಪರಿಹಾರ ಆಗಲ್ಲ ಎಂದು ಮಂಗಳೂರಿನಲ್ಲಿ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಹೇಳಿದ್ದಾರೆ.