ಕಾಸರಗೋಡು,ಜೂ 06 (DaijiworldNews/HR): ಕರ್ನಾಟಕದಿಂದ ಅಕ್ರಮವಾಗಿ ಕೇರಳಕ್ಕೆ ಬರುತ್ತಿರುವ ದೋಣಿಗಳಿಗೆ ಕಡಿವಾಣ ಹಾಕುವಂತೆ ಮೀನುಗಾರರು ಮತ್ತು ಕಾರ್ಮಿಕರ ಕಲ್ಯಾಣ ಸದನ ಸಮಿತಿ ನಿರ್ದೇಶನ ನೀಡಿದ್ದು,ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸರಕಾರಕ್ಕೆ ಶಿಫಾರಸು ಮಾಡಿದೆ.
ಸಮಿತಿ ಅಧ್ಯಕ್ಷ ಪಿ.ಪಿ.ಚಿತ್ತರಂಜನ್ ಮಾತನಾಡಿ, ಅಕ್ರಮ ಮೀನುಗಾರಿಕೆ ತಡೆಗೆ ಕೀಯೂರು ಮೀನುಗಾರಿಕಾ ಠಾಣೆಗೆ ಕಡಲ ರಕ್ಷಕ ಸಿಬ್ಬಂದಿ ಸೇರಿದಂತೆ ಸಾಕಷ್ಟು ಸಿಬ್ಬಂದಿಯನ್ನು ಕೂಡಲೇ ನಿಯೋಜಿಸಲು ಸಮಿತಿ ಸರ್ಕಾರಕ್ಕೆ ಶಿಫಾರಸು ಮಾಡಲಿದೆ ಎಂದರು.
ಸೀಮೆಎಣ್ಣೆಯ ಸಬ್ಸಿಡಿ ದರ ಹೆಚ್ಚಿಸಬೇಕು. ಪ್ರತಿ ಲೀಟರ್ ಬೆಲೆ 122 ರೂ. ನೀಡಿ ಈಗ ಮೀನುಗಾರರು ಖರೀದಿಸಬೇಕಾದ ಸ್ಥಿತಿ ಉಂಟಾಗಿದೆ. ಅಜನೂರು ಮತ್ತು ಕೊಟ್ಟಿಕುಲಂ ಮೀನುಗಾರಿಕಾ ಬಂದರನ್ನು ಸಾಕಾರಗೊಳಿಸಬೇಕು. ಮಂಜೇಶ್ವರ ಮೀನುಗಾರಿಕಾ ಬಂದರಿನ ಬಳಿ ಅಪಾಯಕಾರಿ ಕರಾವಳಿ ಕೊರೆತವನ್ನು ತಡೆಗಟ್ಟಲು ಕಸಬಾ ಮೀನುಗಾರಿಕಾ ಬಂದರು ಸಂಪೂರ್ಣವಾಗಿ ಕಾರ್ಯನಿರ್ವಹಿಸಬೇಕು. ಲೈಫ್ ಯೋಜನೆಯಲ್ಲಿ ಮೀನುಗಾರರಿಗೆ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ವಿವಿಧ ಸಂಘಟನೆಗಳ ಪ್ರತಿನಿಧಿಗಳು ಸದನ ಸಮಿತಿ ಮುಂದೆ ಅಹವಾಲು ಮುಂದಿಟ್ಟರು ಕಸಬಾ ಮೀನುಗಾರಿಕಾ ಬಂದರು ರಸ್ತೆಯನ್ನು ಮೇಲ್ದರ್ಜೆಗೇರಿಸಬೇಕು ಎಂದು ಒತ್ತಾಯಿಸಿದರು.
ಮೀನುಗಾರರ ಮಕ್ಕಳಿಗೆ ವಿವಾಹ ಸಹಾಯ ವೇತನ ಎರಡು ವರ್ಷಗಳಿಂದ ನೀಡಿಲ್ಲ ಎಂಬ ದೂರಿನ ಮೇರೆಗೆ ಮೀನುಗಾರರ ಹೆಣ್ಣು ಮಕ್ಕಳ ವಿವಾಹ ಸಹಾಯಧನವನ್ನು ಕೂಡಲೇ ಪಾವತಿಸುವಂತೆ ಮೀನುಗಾರರ ಕಲ್ಯಾಣ ನಿಧಿ ಮಂಡಳಿ ಸೂಚಿಸಿದೆ.
ಶಾಸಕರಾದ ಎನ್.ಎ.ನೆಲ್ಲಿಕುನ್ನು, ಕಾನತಿಲ್ ಜಮೀಲಾ, ಎನ್.ಕೆ.ಅಕ್ಬರ್, ಎಂ.ವಿನ್ಸೆಂಟ್ ಕೂಡ ವಿಚಾರಣೆಗೆ ಹಾಜರಾಗಿದ್ದರು. ಶಾಸಕಾಂಗ ಸಚಿವಾಲಯದ ಅಧೀನ ಕಾರ್ಯದರ್ಶಿ ಬಿ. ಅನಿಲ್ ಕುಮಾರ್ ನೌಕರರಾದ ವಿಷ್ಣು ಎಂ. ಕಿಶೋರ್, ಎಡಿಎಂ ಎ.ಕೆ.ರಮೇಂದ್ರನ್, ಮೀನುಗಾರಿಕೆ ಉಪನಿರ್ದೇಶಕ ಪಿ.ವಿ.ಸತೀಶನ್, ಹಾರ್ಬರ್ ಇಂಜಿನಿಯರಿಂಗ್ ಎಕ್ಸಿಕ್ಯೂಟಿವ್ ಇಂಜಿನಿಯರ್ ಮೊಹಮ್ಮದ್ ಅಶ್ರಫ್, ಕಾಸರಗೋಡು ಪುರಸಭಾ ಕಾರ್ಯದರ್ಶಿ ಲಿಲಿಟಿ ಥಾಮಸ್, ಮೀನುಗಾರಿಕಾ ಜಿಲ್ಲಾ ಅಧಿಕಾರಿ ಕೆ.ಎಚ್ ಶರೀಫ್, ಸಿ. ಆದರ್ಶ್ ಮೊದಲಾದವರು ಉಪಸ್ಥಿತರಿದ್ದರು.