ಮಂಗಳೂರು, ಜೂ 06 (DaijiworldNews/HR): ಕುದುರೆಮುಖ ಕಬ್ಬಿಣದ ಅದಿರು ರಫ್ತಿಗೆ ಸರಕಾರ ವಿಧಿಸಿರುವ ಶೇ.45ರಷ್ಟು ತೆರಿಗೆಯನ್ನು ಹಿಂಪಡೆಯಬೇಕು ಹಾಗೂ ಶೇ.100ರಷ್ಟು ತೆರಿಗೆ ವಿನಾಯಿತಿ ನೀಡುವಂತೆ ಶಾಸಕ ಯು.ಟಿ.ಖಾದರ್ ಒತ್ತಾಯಿಸಿದ್ದಾರೆ.
ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರ್ಕಾರವು ಇತ್ತೀಚೆಗೆ ರಫ್ತು ಘಟಕದ ಮೇಲೆ 45% ತೆರಿಗೆ ವಿಧಿಸಿದ್ದು, ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ ಮೇಲೆ ಹೇರಲಾದ ಭಾರೀ ತೆರಿಗೆಗಳ ದುಷ್ಪರಿಣಾಮಗಳ ಬಗ್ಗೆ ಕಳವಳ ವ್ಯಕ್ತಪಡಿಸಿದ ಅವರು, ಕುದುರೆಮುಖ ಬಹಳ ಹಿಂದಿನಿಂದಲೂ ಕರಾವಳಿ ಕರ್ನಾಟಕದ ಹೆಮ್ಮೆಯಾಗಿ ನಿಂತಿದೆ. ಅದರ ಅದ್ಭುತ ಇತಿಹಾಸ ಮತ್ತು ಉದ್ಯಮಕ್ಕೆ ನೀಡಿದ ಕೊಡುಗೆ ಆರ್ಥಿಕ ಕ್ಷೇತ್ರದಲ್ಲಿ ಪ್ರಮುಖವಾಗಿದೆ ಎಂದರು.
ಕುದುರೆಮುಖ ಕಬ್ಬಿಣದ ಉದ್ಯಮಕ್ಕೆ ಬೃಹತ್ ಕೊಡುಗೆಗಳನ್ನು ನೀಡುವ ಅತ್ಯಂತ ಪ್ರಮುಖ ಉದ್ಯಮವಾಗಿದೆ. ಆದರೆ ಇಂದಿನ ಸ್ಥಿತಿಯು ಚಿಂತಾಜನಕವಾಗಿದೆ ಏಕೆಂದರೆ ರಫ್ತು ಮಾಡುವ ಉತ್ಪನ್ನಗಳ ಮೇಲೆ 45% ತೆರಿಗೆ ವಿಧಿಸಲಾಗಿದೆ ಮತ್ತು ಇದು ಸಮಸ್ಯೆಯನ್ನು ಇನ್ನಷ್ಟು ಹದಗೆಡಿಸುತ್ತದೆ ಎಂದಿದ್ದಾರೆ.
ಕುದುರೆಮುಖ ಕಬ್ಬಿಣದ ಅದಿರು ಸಂಸ್ಥೆಯ ಉಳಿವಿಗಾಗಿ ತೆರಿಗೆಯನ್ನು ಮನ್ನಾ ಮಾಡಬೇಕು. ಎನ್ಎಂಪಿಟಿಯನ್ನು ಈಗಾಗಲೇ 3 ಕೈಗಾರಿಕೋದ್ಯಮಿಗಳಿಗೆ ಹಸ್ತಾಂತರಿಸಲಾಗಿದೆ. ಆದ್ದರಿಂದ, ನಾವು ಈ ಸಮಸ್ಯೆಗೆ ನ್ಯಾಯವನ್ನು ಕೇಳುತ್ತೇವೆ. ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ವಾಣಿಜ್ಯ ಸಚಿವಾಲಯವು ತಕ್ಷಣವೇ ಈ ವಿಷಯದ ಬಗ್ಗೆ ಜಂಟಿಯಾಗಿ ಕ್ರಮಕೈಗೊಳ್ಳಬೇಕು. ಇದು ಸಾರ್ವಜನಿಕ ವಲಯಕ್ಕೆ ತೀವ್ರ ಹಿನ್ನಡೆಯಾಗಲಿದೆ ಎಂದರು.
ಇನ್ನು ಈ ವಿಷಯದಲ್ಲಿ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ವಿಫಲವಾದರೆ, ನ್ಯಾಯಕ್ಕಾಗಿ ಒತ್ತಾಯಿಸಿ ಕಾಂಗ್ರೆಸ್ ಪಕ್ಷವು ಬೃಹತ್ ಪ್ರತಿಭಟನೆಯನ್ನು ನಡೆಸಲಿದೆ ಎಂದು ಹೇಳಿದ್ದಾರೆ.
ಹಿಜಾಬ್ ಸಕುರಿತು ಮಾತನಾಡಿದ ಅವರು, ವಿದ್ಯಾರ್ಥಿಗಳಿಗೆ ಏನಾದರೂ ಸಮಸ್ಯೆ ಇದ್ದರೆ, ಅವರು ನ್ಯಾಯಾಲಯವನ್ನು ಸಂಪರ್ಕಿಸಬೇಕು. ಜಿಲ್ಲಾಧಿಕಾರಿ ಹಾಗೂ ಉಪಕುಲಪತಿಗಳಿಂದ ಸಮಸ್ಯೆ ಬಗೆಹರಿಸಲು ಸಾಧ್ಯವಾಗದಿದ್ದರೆ ವಿದ್ಯಾರ್ಥಿಗಳು ಕಾನೂನು ಹೋರಾಟ ಮಾಡಬೇಕಾಗುತ್ತದೆ. ಹಿಜಾಬ್ ವಿಷಯದಲ್ಲಿ, ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವುದು ಬಹಳ ಮುಖ್ಯ ಮತ್ತು ಅದೇ ಸಮಯದಲ್ಲಿ ವಿದ್ಯಾರ್ಥಿನಿಯರಿಗೆ ಶಿಕ್ಷಣವೂ ಮುಖ್ಯವಾಗಿದೆ ಎಂದು ಹೇಳಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಜೆ.ಆರ್.ಲೋಬೊ, ಶಕುಂತಳ ಶೆಟ್ಟಿ, ಕಾಂಗ್ರೆಸ್ ಮುಖಂಡರಾದ ಸಾಹುಲ್ ಹಮೀದ್, ಸದಾಶಿವ ಉಳ್ಳಾಲ್ ಮೊದಲಾದವರು ಉಪಸ್ಥಿತರಿದ್ದರು.