ಕುಂದಾಪುರ, ಜ 12(SM): ಅಕ್ರಮವಾಗಿ ಹಿಡಿದು ಮಾರಾಟಕ್ಕೆ ಸಿದ್ಧಪಡಿಸಿಕೊಂಡಿದ್ದ 26 ಗಿಣಿಗಳ ಸಹಿತ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳು ಆರೋಪಿಯನ್ನು ಬಂಧಿಸಿದ ಘಟನೆ ಶುಕ್ರವಾರ ಬಂಟ್ವಾಳ ತಾಲೂಕಿನ ಮೆಲ್ಕಾರಿನಲ್ಲಿ ನಡೆದಿದೆ. ಬಂಧಿತ ಆರೋಪಿಯನ್ನು ಮೆಲ್ಕಾರಿನ ನಿವಾಸಿ ಅಬ್ದುಲ್ ಲತೀಫ್ ಎಂದು ಗುರುತಿಸಲಾಗಿದೆ.
ಬೆಂಗಳೂರಿನ ಸಿಐಡಿ ಅರಣ್ಯ ಘಟಕದ ಅಧಿಕಾರಿಗಳಿಗೆ ದೊರಕಿದ ಖಚಿತ ಮಾಹಿತಿ ಆಧರಿಸಿ ಆರೋಪಿ ಅಬ್ದುಲ್ ಲತೀಫ್ ನನ್ನು ಕೆಲವು ದಿನಗಳ ಹಿಂದೆಯೇ ಸಂಪರ್ಕಿಸಿ ಗಿಣಿ ವ್ಯವಹಾರದ ಮಾತುಕತೆ ನಡೆಸಿದ್ದ ಸಿಐಡಿ ಅಧಿಕಾರಿಗಳು ಗಿಣಿ ಖರೀದಿಗೆ ಬರುವುದಾಗಿ ತಿಳಿಸಿದ್ದರೆನ್ನಲಾಗಿದೆ.
ಆರೋಪಿ ಗಿಣಿ ಮಾರಾಟಕ್ಕೆ ಸಿದ್ಧನಾಗಿದ್ದು ಮಪ್ತಿಯಲ್ಲಿದ್ದ ಅಧಿಕಾರಿಗಳಿಗೆ ಗಿಣಿಗಳನ್ನು ತೋರಿಸುತ್ತಿದ್ದ ವೇಳೆ ಆರೋಪಿಯನ್ನು ಮಾಲು ಸಹಿತ ವಶಕ್ಕೆ ಪಡೆದುಕೊಳ್ಳಲಾಗಿದೆ ಎನ್ನಲಾಗಿದೆ.
ಬಂಧಿತ ಆರೋಪಿ ಅಬ್ದುಲ್ ಲತೀಫ್ ವಿರುದ್ಧ ಬಂಟ್ವಾಳ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ಅಬ್ದುಲ್ಲ ಕೆಲವು ವರ್ಷಗಳಿಂದ ಗಿಣಿ ಹಿಡಿದು ಮಾರಾಟ ಮಾಡುವ ದಂಧೆ ನಡೆಸುತ್ತಿದ್ದ ಎನ್ನಲಾಗಿದೆ. ಅರಣ್ಯ ಘಟಕದ ಡಿವೈಎಸ್ಪಿ ಎಸ್.ಎಸ್.ಕಾಶಿ ಮಾರ್ಗದರ್ಶನದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಸಬ್ ಇನ್ಸ್ಪೆಕ್ಟರ್ಗಳಾದ ಎಚ್.ಕೆ. ರವಿಕುಮಾರ್ ಹಾಗೂ ಎಂ.ಎಸ್.ರಾಮಮೂರ್ತಿ, ಸಿಬ್ಬಂದಿಗಳಾದ ಬಿ.ಹೆಚ್. ಹೇಮಕುಮಾರ್ ಮತ್ತು ಬಿ.ವಿ.ಪರಮೇಶ್ ಭಾಗವಹಿಸಿದ್ದರು.