ಸುಳ್ಯ, ಜೂ 06 (DaijiworldNews/MS): ಅಪರಿಚಿತ ದುಷ್ಕರ್ಮಿಗಳು ವ್ಯಕ್ತಿಯೋರ್ವನ ಮೇಲೆ ಗುಂಡಿನ ದಾಳಿ ನಡೆಸಿದ ಘಟನೆ ಸುಳ್ಯದ ವೆಂಕಟರಮಣ ಸೊಸೈಟಿ ಬಳಿ ಜೂ 05 ರ ರಾತ್ರಿ 10:30 ಸುಮಾರಿಗೆ ನಡೆದಿದೆ.
ಗುಂಡಿನ ದಾಳಿಯಿಂದ ಗಾಯಗೊಂಡವರನ್ನು ಸುಳ್ಯ ಕಸಬಾ ಗ್ರಾಮದ ಜಯನಗರ ಮನೆಯ ಮಹಮ್ಮದ್ ಸಾಯಿ(39) ಎಂದು ಗುರುತಿಸಲಾಗಿದೆ.
ಸುಳ್ಯದ ಮೊಗರ್ಪಣೆ ಯಲ್ಲಿರುವ ಶ್ರೀ ವೆಂಕಟರಮಣ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಬಳಿ ಮಹಮ್ಮದ್ ಸಾಯಿ ತನ್ನ ಕ್ರೆಟ್ಟಾ ಕಾರನ್ನು ನಿಲ್ಲಿಸಿ ತನ್ನ ತಂಗಿಯ ಮನೆಗೆ ಹೋಗಿ, ಅಲ್ಲಿಂದ ಹಿಂತಿರುಗಿ ಅವರು ತನ್ನ ಕಾರನ್ನು ಏರುತ್ತಿರುವ ಸಂದರ್ಭ ಹಿಂದಿನಿಂದ ಬಂದ ಕೆಎ 12 ರಿಜಿಸ್ಟರ್ನ ಸ್ಕಾರ್ಪಿಯೋ ಕಾರಿನಲ್ಲಿ ನಾಲ್ವರು ದುಷ್ಕರ್ಮಿಗಳು ಸಾಯಿ ಕಡೆಗೆ ಗುಂಡು ಹಾರಿಸಿದ್ದಾರೆ.
ಗುಂಡು ಬೆನ್ನಿನ ಎಡ ಬದಿಗೆ ತಾಗಿ ಕಾರಿನ ಬಲ ಬದಿಯ ಎರಡು ಡೋರ್ಗಳ ಮದ್ಯಕ್ಕೆ ಗುಂಡು ತಗುಲಿ ಕಾರು ಜಖಂಗೊಂಡಿದೆ. ಗಾಯಾಳು ಸುಳ್ಯ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ
ಈ ಕುರಿತು ಸುಳ್ಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಸರ್ಕಲ್ ಇನ್ಸ್ ಪೆಕ್ಟರ್ ನವೀನ್ ಚಂದ್ರ ಜೋಗಿ ಮತ್ತು ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದ್ದಾರೆ.