ಬಂಟ್ವಾಳ, ಜೂ 06 (DaijiworldNews/MS): ರಾಜ್ಯ ಹೆದ್ದಾರಿ 74 ರ ಬಂಟ್ವಾಳ - ಧರ್ಮಸ್ಥಳ ರಸ್ತೆಯ ಬಂಟ್ವಾಳ ಹೊಸಮಾರು ಎಂಬಲ್ಲಿ ಕಳೆದ ಕೆಲವು ತಿಂಗಳಿನಿಂದ ಖಾಸಗಿ ವ್ಯಕ್ತಿ ಗೆ ಸೇರಿದ ಕಪ್ಪು ಕಲ್ಲು,ಮರಳು, ಜಲ್ಲಿ ಕಲ್ಲು ರಾಶಿ ಹಾಕಿದ ಪರಿಣಾಮ ಶನಿವಾರ ರಾತ್ರಿ ಮಧ್ಯರಾತ್ರಿಯಲ್ಲಿ ಕಾರೊಂದು ಅಪಘಾತ ಸಂಭವಿಸಿದೆ.
ಅಪಘಾತದಿಂದ ಕಾರಿಗೆ ಡ್ಯಾಮೇಜ್ ಆಗಿದ್ದು, ಮಧ್ಯ ರಾತ್ರಿ 1 ಗಂಟೆ ವೇಳೆ ಸ್ಥಳೀಯರಿಂದ ಪ್ರತಿಭಟನೆ ನಡೆದಿದೆ. ಹೊಸಮಾರು ಎಂಬ ಸ್ಥಳದಿಂದ ಮುಂದೆ ಅನೇಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆಯನ್ನು ಬಂದ್ ಮಾಡುವ ಉದ್ದೇಶದಿಂದ ಇಲ್ಲಿ ಕಲ್ಲು ರಾಶಿ ಹಾಕಿದ್ದಾರೆ ಎಂದು ಸ್ಥಳೀಯರು ಆರೋಪ ವ್ಯಕ್ತಪಡಿಸಿದ್ದಾರೆ.
ಈ ರಸ್ತೆಯಲ್ಲಿ ಕಳೆದ ಕೆಲವು ತಿಂಗಳಿನಿಂದ ಕಪ್ಪು ಕಲ್ಲು ಸಹಿತ ಇನ್ನಿತರ ಸಾಮಾಗ್ರಿಗಳನ್ನು ಉದ್ದೇಶಪೂರ್ವಕವಾಗಿ ರಾಶಿ ಹಾಕಿದ್ದಲ್ಲದೆ, ಸಂಚಾರಕ್ಕೆ ತೊಂದರೆ ಮಾಡುವ ಪರಿಸ್ಥಿತಿ ನಿರ್ಮಾಣ ಮಾಡಿದ್ದಾರೆ.ಇದರಿಂದ ನಡೆಯುವ ಅಪಘಾತಗಳಿಗೂ ಇವರೇ ನೇರ ಹೊಣೆಯಾಗಿದ್ದಾರೆ ಎಂದು ಆರೋಪಿಸಿ ಸ್ಥಳೀಯರು ಅನೇಕ ಬಾರಿ ಪ್ರತಿಭಟನೆ ನಡೆಸಲಾಗಿದೆಯಾದರೂ ಯಾವುದೇ ಪ್ರಯೋಜನವಾಗಿಲ್ಲ.
ಹೆದ್ದಾರಿಯಲ್ಲಿ ಒಂದು ನಿಮಿಷಗಳ ಕಾಲ ಸಂಚಾರಕ್ಕೆ ಅಡಚಣೆಯಾದರೂ ಕ್ರಮ ಕೈಗೊಳ್ಳಲು ಹಿಂದೆ ಮುಂದೆ ನೋಡದ ಇಲಾಖೆ ಇವರ ಬೇಜಾಬ್ದಾರಿ ವರ್ತನೆಗೆ ಏನು ಮಾಡಲಾಗದೆ ಕೈ ಕಟ್ಟಿ ಕುಳಿತಿದೆ ಎಂದು ಸಾರ್ವಜನಿಕ ರು ಆರೋಪಿಸಿದ್ದಾರೆ.
ಪದೇಪದೇ ಇಲ್ಲಿ ಅಪಘಾತ ಗಳು ನಡೆದಿದ್ದು ಅನೇಕ ಸವಾರರಿಗೆ ಗಾಯವಾಗಿದೆ. ಆದರೂ ಸಂಬಂಧಿಸಿದ ಇಲಾಖೆಯ ನಿಲುವು ಏನು ಎಂಬ ಪ್ರಶ್ನೆ ಸಾರ್ವಜನಿಕರದ್ದು.
ಏನೇ ಇರಲಿ ಸಂಬಂಧಿಸಿದ ಇಲಾಖೆ ಕೂಡಲೇ ಪ್ರಾಣ ಹಾನಿ ಸಂಭವಿಸುವ ಮೊದಲು ಎಚ್ಚೆತುಕೊಂಡು ಅಲ್ಲಿ ರಾಶಿ ಹಾಕಿದ ಎಲ್ಲಾ ಸೊತ್ತುಗಳನ್ನು ತೆಗೆಯುವಂತೆ ವಿನಂತಿ ಮಾಡಿಕೊಂಡಿದ್ದಾರೆ.