ಕುಂದಾಪುರ, ಜ 12(SM): ನಿರ್ಭೀತಿಯಿಂದ ಇದ್ದ ಕರಾವಳಿಯ ಜನರಿಗೆ ಭೂಕಂಪನದ ಭಯ ಕಾಡಲಾರಂಭಿಸಿದೆ. ಕುಂದಾಪುರ ತಾಲೂಕಿನ ಬೈಂದೂರು ಸಮೀಪದ ಗಂಗನಾಡು ಎಂಬಲ್ಲಿ ಭೂಕಂಪನದ ಅನುಭವವಾಗಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಶುಕ್ರವಾರ ಮಧ್ಯಾಹ್ನದ ಸುಮಾರಿಗೆ ಭೂಮಿ ಅದುರಿದ ಅನುಭವವಾಗಿದ್ದು, ಲಘು ಭೂಕಂಪನದ ಶಂಕೆ ವ್ಯಕ್ತವಾಗಿದೆ. ಗಂಗನಾಡು ಪ್ರದೇಶದಲ್ಲಿ ಈ ರೀತಿಯ ಕಂಪನ ನಡೆದಿದ್ದು, ಗಂಗನಾಡು ಶಾಲೆಯಲ್ಲಿ ಮಕ್ಕಳ ಊಟಕ್ಕೆಂದು ಜೋಡಿಸಲಾದ ಬಟ್ಟಲುಗಳು ಕಂಪಿಸಿವೆ. ಪಾತ್ರೆಗಳು ಅಲುಗಾಡಿದ ಶಬ್ಧ ಕೇಳಿಸಿವೆ ಎನ್ನಲಾಗಿದೆ.
ಇನ್ನು ಕೆಲವರು ಸ್ಥಳೀಯವಾಗಿ ಸುತ್ತಮುತ್ತಲು ಪ್ರದೇಶದಲ್ಲಿ ಕೆಂಪು ಹಾಗೂ ಶಿಲೆಗಲ್ಲಿನ ಗಣಿಗಾರಿಕೆ ನಡೆಸಲಾಗುತ್ತಿದ್ದು, ಇದರಿಂದಾಗಿಯೇ ಭೂಮಿಯ ಅಸಮತೋಲನದಿಂದಾಗಿ ಭೂಮಿ ಅದುರಿದೆ ಎಂದು ತಿಳಿಸಿದ್ದಾರೆ. ಆದರೆ ತಜ್ಞರ ಪರಿಶೀಲನೆಯ ಬಳಿಕವಷ್ಟೆ ಭೂಕಂಪನಕ್ಕೆ ಕಾರಣ ಏನು ಎಂದು ತಿಳಿದು ಬರಬೇಕಿದೆ.