ಉಳ್ಳಾಲ, ಜೂ 05 (DaijiworldNews/SM): ಹರೇಕಳ ಅಣೆಕಟ್ಟು ಸೇತುವೆಯಿಂದಾಗಿ ಮುಳುಗಡೆ ಭೀತಿ ಎದುರಿಸುತ್ತಿರುವ ಪಾವೂರು ಗ್ರಾಮದ ಉಳಿಯ ದ್ವೀಪಕ್ಕೆ ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳು ಹಾಗೂ ಸ್ಥಳೀಯ ಜನಪ್ರತಿನಿಧಿಗಳೊಂದಿಗೆ ವಿಧಾನಸಭೆ ವಿಪಕ್ಷ ಉಪನಾಯಕ ಯು.ಟಿ.ಖಾದರ್ ತೆರಳಿ ಪರಿಶೀಲನೆ ನಡೆಸಿದರು.
ಉಳಿಯ ಪ್ರದೇಶದ ಬಾಲಯೇಸು ಚರ್ಚ್ ಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಚರ್ಚ್ ಮುಖ್ಯ ಗುರುಗಳು ಹಾಗೂ ಸ್ಥಳೀಯರ ಅಹವಾಲು ಸ್ವೀಕರಿಸಿದರು. ಈ ಸಂದರ್ಭದಲ್ಲಿ ಅಣೆಕಟ್ಟುವನಿಂದಾಗಿ ದ್ವೀಪಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ತೆಗೆದುಕೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳಲ್ಲಿ ಸ್ಥಳದಲ್ಲಿಯೇ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಲು ಸೂಚಿಸಿದರು.
ಅಲ್ಲದೇ ಉಳಿಯ ಪ್ರದೇಶದ ಜನರ ಓಡಾಟದ ಅನುಕೂಲಕ್ಕಾಗಿ ಪಾದಚಾರಿ ಸೇತುವೆ ನಿರ್ಮಾಣದ ಕುರಿತು ಸಮೀಕ್ಷೆ ನಡೆಸಲು ಅಧಿಕಾರಿಗಳಿಗೆ ಖಾದರ್ ಸೂಚನೆ ನೀಡಿದರು. ಈ ಬಗ್ಗೆ ಅತೀ ಶೀಘ್ರದಲ್ಲಿ ಉನ್ನತ ಮಟ್ಟದ ಅಧಿಕಾರಿಗಳ ತಂಡ ಕೂಡಾ ಉಳಿಯ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಲಿದ್ದಾರೆ.