ಬಂಟ್ವಾಳ, ಜೂ 05 (DaijiworldNews/SM): ಸೈಕಲ್ನಲ್ಲಿ ತೆರಳುತ್ತಿದ್ದ ಬಾಲಕನಿಗೆ ಜೆಸಿಬಿ ವಾಹನ ಡಿಕ್ಕಿ ಹೊಡೆದ ಪರಿಣಾಮ ಬಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ಕನ್ಯಾನ ಗ್ರಾಮದ ಕಣಿಯೂರು ಸಮೀಪ ನಡೆದಿದೆ.ಕಣಿಯೂರು ನಿವಾಸಿ ಹಸೈನಾರ್ ಅವರ ಪುತ್ರ ಏಳನೇ ತರಗತಿ ವಿದ್ಯಾರ್ಥಿ ಅಹಮ್ಮದ್ ಅಖಿಲ್(12) ಮೃತಪಟ್ಟ ಬಾಲಕ.
ಕನ್ಯಾನದ ಕಣಿಯೂರು ಎಂಬಲ್ಲಿಯ ಉದ್ಯಮಿಯ ಮನೆಗೆ ಕೆಲಸಕ್ಕೆಂದು ಬರುತ್ತಿದ್ದ ಜೆಸಿಬಿ ರಸ್ತೆ ಬದಿಯಲ್ಲಿ ಸೈಕಲ್ ನಲ್ಲಿ ತೆರಳುತ್ತಿದ್ದ ಬಾಲಕನ ಮೇಲೆ ಡಿಕ್ಕಿ ಹೊಡೆದಿದೆ. ಮೊದಲೇ ನಶೆಯಲ್ಲಿದ್ದ ಗದಗ ಮೂಲದ ಚಾಲಕ ಬಾಷಾ ತನ್ನ ನಿರ್ಲಕ್ಷ್ಯದ ಚಲಾವಣೆಯಿಂದ ಜೆಸಿಬಿ ಬಾಲಕನ ಮೇಲೆ ಎರಗಿದೆ ಎನ್ನಲಾಗಿದೆ. ಸ್ಥಳದಲ್ಲೇ ಸಾವನ್ನಪ್ಪಿದ ಬಾಲಕನನ್ನು ಜೆಸಿಬಿ ಕೊಕ್ಕಿನಿಂದ ಪಕ್ಕಕ್ಕೆ ಸರಿಸಿ ತಾನೂ ಮಾಡಬೇಕಾದ ಕೆಲಸದ ಜಾಗಕ್ಕೆ ಹೋಗಿದ್ದಾನೆನ್ನಲಾಗಿದೆ. ಬಳಿಕ ಬೇರೊಬ್ಬ ಚಾಲಕ ಬರುತ್ತಾನೆಂದು ಹೇಳಿ ಅಲ್ಲಿಂದ ಪರಾರಿಯಾಗಲು ಯತ್ನಿಸುತ್ತಿದ್ದಾಗ ಮಾಹಿತಿ ಪಡೆದ ಸ್ಥಳೀಯರು ಚಾಲಕನಿಗೆ ಗೆ ಹಿಗ್ಗಾಮುಗ್ಗಾ ಥಳಿಸಿ, ಬಳಿಕ ವಿಟ್ಲ ಪೊಲೀಸರ ವಶಕ್ಕೆ ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ವಿಟ್ಲ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.