ಸುಬ್ರಹ್ಮಣ್ಯ, ಜೂ 05 (DaijiworldNews/SM): ನಾಗಾರಾಧನೆಯ ಪುಣ್ಯ ಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದತ್ತ ರವಿವಾರ ಭಾರೀ ಸಂಖ್ಯೆಯಲ್ಲಿ ಭಕ್ತ ಸಾಗರ ಹರಿದುಬಂದಿದೆ. ಷಷ್ಠಿ, ಆಶ್ಲೇಷ ನಕ್ಷತ್ರ ಮತ್ತು ಶ್ರೀ ದೇವರು ಒಳಾಂಗಣ ಪ್ರವೇಶಿಸುವ ಪುಣ್ಯ ದಿನ ಹಾಗೂ ರಜಾದಿನವಾದ ರವಿವಾರ ಆಗಿರುವ ಹಿನ್ನೆಲೆಯಲ್ಲಿ ಕ್ಷೇತ್ರಕ್ಕೆ ಭಕ್ತ ಸಮೂಹವೇ ಹರಿದು ಬಂದಿದೆ.
ಇಂದು ಷಷ್ಠಿ, ಆಶ್ಲೇಷ ನಕ್ಷತ್ರ ಆದ್ದರಿಂದ ಆಶ್ಲೇಷ ಪೂಜೆಗೆ ಕುಕ್ಕೆ ಸುಬ್ರಹ್ಮಣ್ಯದಲ್ಲಿ ಭಕ್ತರು ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದತ್ತ ಆಗಮಿಸಿದ್ದಾರೆ. ರಾಜಗೋಪುರದಿಂದ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ವರೆಗೂ ಭಕ್ತರ ಸರತಿ ಸಾಲಿನಲ್ಲಿ ನಿಂತಿರುವುದು ಕಂಡು ಬಂದಿದೆ.
ಶನಿವಾರ ರಾತ್ರಿಯೇ ಕ್ಷೇತ್ರಕ್ಕೆ ಅತ್ಯಧಿಕ ಭಕ್ತರು ಆಗಮಿಸಿದ್ದರು. ಈ ಕಾರಣದಿಂದ ದೇವಳದ ವಸತಿ ಗೃಹ ಹಾಗೂ ಖಾಸಗಿ ವಸತಿ ಗೃಹಗಳು ತುಂಬಿತ್ತು. ಆದುದರಿಂದ ಶ್ರೀ ದೇವಳದ ಷಣ್ಮುಖ ಪ್ರಸಾದ ಭೋಜನ ಶಾಲೆಯ ಮೇಲ್ಮಹಡಿ ಮತ್ತು ಆದಿ ಸುಬ್ರಹ್ಮಣ್ಯ ಕಲ್ಯಾಣ ಮಂಟಪದಲ್ಲಿ ಭಕ್ತರಿಗೆ ತಂಗಲು ವಿಶೇಷ ವ್ಯವಸ್ಥೆ ಮಾಡಲಾಗಿತ್ತು.