ವಿಶೇಷ ವರದಿ: ಆರ್.ಬಿ.ಜಗದೀಶ್
ಕಾರ್ಕಳ, ಜೂ 05 (DaijiworldNews/HR): ಸ್ವಚ್ಚ ಕಾರ್ಕಳ, ಸುಂದರ ಕಾರ್ಕಳ ಯೋಜನೆಗೆ ಕಾರ್ಕಳ ಪುರಸಭೆಯೇ ವಿಘ್ನುವಾಗಿ ಪರಿಣಮಿಸಿದೆ. ಇದಕ್ಕೆ ಇಂಬು ನೀಡುವಂತೆ ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಸ್ವಚ್ಚತಾ ಕಾರ್ಯವು ಮಂದಗತಿಯಲ್ಲಿಯೇ ಸಾಗಿತ್ತಿದ್ದು, ಪುರಸಭಾ ಜನಪ್ರತಿನಿಧಿಗಳ ಹಾಗೂ ಅಧಿಕಾರಿ ವರ್ಗದವರ ನಿರ್ಲಕ್ಷ್ಯ ಧೋರಣೆ ಕಾರಣವಾಗಿದೆ ಎಂಬ ಆರೋಪವು ವ್ಯಾಪಕವಾಗಿ ಕೇಳಿಬರುತ್ತಿವೆ.
ಮನೆಗಳಿಂದ ಹಾಗೂ ವಾಣಿಜ್ಯ ಸಂಕೀರ್ಣಗಳಿಂದ ಹಸಿ, ಒಣ ಹಾಗೂ ಅಪಾಯಕಾರಿ ಕಸಗಳನ್ನು ಸಮರ್ಪಕವಾಗಿ ಸಂಗ್ರಹಿಸದೇ ಇರುವುದರಿಂದ ನಗರದ ಹಲವೆಡೆಗಳಲ್ಲಿ ತ್ಯಾಜ್ಯದ ಗೊಂಪೆಗಳು ಕಾಣಸಿಗುತ್ತಿದೆ. ಸಾರ್ವಜನಿಕರು ಪುರಸಭೆಗೆ ಈ ಕುರಿತು ಮಾಹಿತಿ ನೀಡದರೂ ಸಂಬಂಧ ಪಟ್ಟವರಿಂದ ಸಕಾರಾತ್ಮಕ ಸ್ಪಂದನೆ ನೀಡದೇ ಇರುವುದರಿಂದ ಸಮಸ್ಸೆ ಯಥಾ ಸ್ಥಿತಿಯಲ್ಲಿ ಮುಂದುವರಿಯಲು ಕಾರಣವಾಗಿದೆ.
ಕಡುಬೇಸಿಗೆಯಲ್ಲಿ ಎಳನೀರಿಗೆ ಎಲ್ಲಿಲ್ಲದ ಬೇಡಿಕೆ ಇತ್ತು. ಅದೇ ಕಾರಣದಿಂದಾಗಿ ನಗರದ ಗೂಡಂಗಡಿ ಹಾಗೂ ಅಂಗಡಿಗಳಲ್ಲಿ ಬಹುಬೇಡಿಕೆಯೊಂದಿಗೆ ಮಾರಾಟವಾಗಿದೆ. ಮುಂಗಾರು ಮಳೆ ಆರಂಭಗೊಂಡಿದ್ದು, ಎಳನೀರು ಮಾರಾಟ ಕೇಂದ್ರಗಳ ಮುಂಭಾಗದಲ್ಲಿ ಎಳನೀರಿನ ಸಿಪ್ಪೆ,ಚಿಪ್ಪು ರಾಶಿ, ರಾಶಿ ಬಿದ್ದುಕೊಂಡಿವೆ. ಕೆಲ ವ್ಯಾಪಾರಿಗಳು ಪ್ಲಾಸ್ಟಿಕ್ ಗೋಣಿಚೀಲಗಳಲ್ಲಿ ತುಂಬಿಸಿ ಪುರಸಭಾ ತ್ಯಾಜ್ಯ ಸಂಗ್ರಹ ವಾಹನಕ್ಕೆ ನೀಡಲು ಮುಂದಾಗಿದ್ದರೂ, ಅದನ್ನು ಸಂಗ್ರಹಿಸುವಲ್ಲಿ ಪುರಸಭೆಯು ಹಿಂದೇಟು ಹಾಕುತ್ತಿದೆ. ಎಳನೀರು ಯಾರು ಮಾರಾಟ ಮಾಡುತ್ತಾರೆಯೋ ಅವರೇ ಅದರ ತ್ಯಾಜ್ಯವನ್ನು ವಿಲೇವಾರಿ ಮಾಡಬೇಕೆಂಬ ಹೊಸ ಅಲಿಖಿತ ನಿಯಮವನ್ನು ಪುರಸಭೆ ಮುಂದಿಟ್ಟಿದೆ. ಈ ಎಲ್ಲಾ ರಾದ್ಧಾಂತಗಳಿಂದಾಗಿ ಎಳನೀರು ವ್ಯಾಪಾರಿಗಳ ಬದುಕಿಗೆ ಪುರಸಭೆಯಿಂದ ತೂಗುಕತ್ತಿ ಎದುರಾಗಿದೆ.
ಮಳೆಗಾಲ ಆರಂಭಗೊಂಡಿದ್ದು, ಮುನ್ನೆಚ್ಚರಿಕ ಕ್ರಮವಾಗಿ ಸ್ಥಳೀಯಾಡಳಿತ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕು. ಟಯರ್, ಬೊಂಡದ ಚಿಪ್ಪು, ತೋಟಗಳಲ್ಲಿ ಹಾಳೆ, ರಬ್ಬರ್ ತೋಟದಲ್ಲಿ ಗೆರಟೆಗಳು, ಮನೆ ಪರಿಸರದಲ್ಲಿ ಪ್ಲಾಸ್ಟಿಕ್ ಸಹಿತ ಇತರ ಪರಿಕರಗಳಲ್ಲಿ ಮಳೆ ನೀರು ನಿಲ್ಲದಂತೆ ಮುನ್ನೆಚ್ಚರಿಕೆ ವಹಿಸುವುದು ಅತೀ ಅಗತ್ಯ. ಇಂತಹ ಪರಿಕರಗಳಲ್ಲಿ ಮಳೆ ನೀರು ನಿಲ್ಲುವುದರಿಂದ ಅದರಲ್ಲಿ ಸೊಳ್ಳೆ ಉತ್ಪತ್ತಿಗೊಂಡು ಇದರಿಂದ ಸಾಂಕ್ರಾಮಿಕ ರೋಗಗಳಾದ ಡೆಂಗ್ಯೂ, ಮಲೇರಿಯಾ, ಚಿಕ್ಕನ್ ಗುನ್ಯಾ ಹರಡುವ ಸಾಧ್ಯತೆ ಹೆಚ್ಚಾಗಿದೆ ಎಂದು ತಾಲೂಕು ಆರೋಗ್ಯ ಆಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಹೇಳಿದ್ದಾರೆ.
ಸ್ವಚ್ಚತೆ ಹೆಚ್ಚು ಒತ್ತು ನೀಡುವ ಸಲುವಾಗಿ ಸಾರ್ವಜನಿಕ ಸ್ಥಳಗಳಲ್ಲಿ ಬಿದ್ದುಕೊಂಡಿರುವ ತ್ಯಾಜ್ಯವನ್ನು ಕೂಡಲೇ ತೆರವು ಗೊಳಿಸಲು ಕ್ರಮಕೈಗೊಳ್ಳುವಂತೆ ಪುರಸಭೆ ಮುಖ್ಯಾಧಿಕಾರಿಗೆ ಸೂಚನೆ ನೀಡುತ್ತೇನೆ ಎಂದು ಕಾರ್ಕಳ ಪುರಸಭೆಯ ಅಧ್ಯಕ್ಷ ಸುಮಕೇಶವ ಹೇಳಿದ್ದಾರೆ.
ಕಾರ್ಕಳ ಪುರಸಭಾ ವ್ಯಾಪ್ತಿಯಲ್ಲಿ ಹಲವು ವಾಣಿಜ್ಯ ಸಂಕೀರ್ಣಗಳಿವೆ. ಅಲ್ಲಿಂದ ತ್ಯಾಜ್ಯ ಸಂಗ್ರಹಿಸುತ್ತಿರುವ ಪುರಸಭೆಯು ಅಂಗಡಿ ಮತ್ತು ಗೂಡಾಂಗಡಿ ವ್ಯಾಪಾರಿಗಳಿಂದ ಮಾತ್ರ ತ್ಯಾಜ್ಯ ಸಂಗ್ರಹಿಸಲು ಹಿಂದೇಟು ಹಾಕುವ ಹಿಂದಿನ ಮರ್ಮವೇನು? ಬಡವರ ಮೇಲೆ ಮಾತ್ರ ಬ್ರಹ್ಮಸ್ತ್ರ ಸಲ್ಲದು. ಸ್ವಚ್ಚ ಕಾರ್ಕಳ ಸುಂದರ ಕಾರ್ಕಳಕ್ಕೆ ಯೋಜನೆಯೂ ಕಾರ್ಕಳ ನಗರದಿಂದಲೇ ಸಕಾರಗೊಳ್ಳಲಿ ಎಂದು ಸಾಮಾಜಿಕ ಹೋರಾಟಗಾರ ಮನೋಜ್ ಶೆಟ್ಟಿ ತಿಳಿಸಿದ್ದಾರೆ.