ಪುತ್ತೂರು, ಜೂ 05 (DaijiworldNews/HR): ಎರಡು ವರ್ಷಗಳ ಹಿಂದೆ ಹಿಂದು ಜಾಗರಣ ವೇದಿಯ ಕಾರ್ಯಕರ್ತ ಕಾರ್ತಿಕ್ ಸುವರ್ಣ ಮೇರ್ಲ ಹತ್ಯೆಯ ಪ್ರಮುಖ ಆರೋಪಿ ಆರ್ಯಾಪು ನಿವಾಸಿ ಚರಣ್ರಾಜ್ ರೈ ಅವರನ್ನು ಕೊಳ್ತಿಗೆ ಸಮೀಪದ ಪೆರ್ಲಂಪಾಡಿಯಲ್ಲಿ ಕೊಲೆ ಮಾಡಿದ ಘಟನೆಗೆ ಸಂಬಂಧಿಸಿದಂತೆ ಕಿಶೋರ್ ಕುಮಾರ್ ಕಲ್ಲಡ್ಕ ಹಾಗೂ ಮತ್ತಿತರರ ವಿರುದ್ಧ ಕೇಸು ದಾಖಲಾಗಿದೆ.
ಕಿಶೋರ್ ಕುಮಾರ್ ಮತ್ತು ಚರಣ್ರಾಜ್ ರೈ
ತನ್ನ ಆಪ್ತ ಹಾಗೂ ಸಂಬಂಧಿಕನೂ ಆಗಿದ್ದ ಕಾರ್ತಿಕ್ ಸುವರ್ಣ ಮೇರ್ಲ ಅವರ ಕೊಲೆಗೆ ಪ್ರತಿಯಾಗಿ ದ್ವೇಷದಿಂದ ಚರಣ್ ರಾಜ್ ರೈ ಕೊಲೆ ನಡೆದಿರುವುದಾಗಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಕಿಶೋರ್ ಪೂಜಾರಿ ಮೂಲತಃ ಬಂಟ್ವಾಳ ತಾಲೂಕಿನ ಕಲ್ಲಡ್ಕ ನಿವಾಸಿಯಾಗಿದ್ದು, ಕಿಶೋರ್ ಪೂಜಾರಿ ಮತ್ತು ಆತನ ಐವರು ಸಹಚರರು ಇತ್ತೀಚೆಗಷ್ಟೇ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿ ಜೈಲು ಸೇರಿದ್ದವರು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದರು ಎಂದು ತಿಳಿದು ಬಂದಿದೆ.
ಸಂಪ್ಯ ನಿವಾಸಿಯಾಗಿರುವ ಚರಣ್ರಾಜ್ ರೈಯವರು ಪೆರ್ಲಂಪಾಡಿಯಲ್ಲಿ ತನ್ನ ಪತ್ನಿಯ ತಂದೆ ಕಿಟ್ಟಣ್ಣ ರೈಯವರ ಮಾಲಕತ್ವದಲ್ಲಿ ಜೂನ್ 5ರಂದು ಶುಭಾರಂಭಗೊಳ್ಳಲಿರುವ ಮೆಡಿಕಲ್ನಲ್ಲಿ ಫರ್ನಿಚರ್, ಔಷಧಿ ಜೋಡಣೆ ಕೆಲಸದ ವೀಕ್ಷಣೆ ಮಾಡಲೆಂದು ಜೂನ್ 4ರಂದು ಸಂಜೆ ತನ್ನ ರಿಡ್ಜ್ ಕಾರಿನಲ್ಲಿ ಬಂದು ಹೊರಗೆ ನಿಂತಿದ್ದ ವೇಳೆ ಎರಡು ಬೈಕ್ಗಳಲ್ಲಿ ಬಂದ ತಂಡ ಚರಣ್ರಾಜ್ ರೈಗೆ ಹರಿತವಾದ ಆಯುಧದಿಂದ ಕುತ್ತಿಗೆಗೆ ಗಾಯಗೊಳಿಸಿ, ತಲೆಗೆ ರಾಡ್ನಿಂದ ಹಲ್ಲೆ ನಡೆಸಿ ಕೊಲೆ ಮಾಡಿ ಬೈಕ್ನಲ್ಲೇ ಪರಾರಿಯಾಗಿದ್ದು, ಈ ವೇಳೆ ಮೆಡಿಕಲ್ನಲ್ಲಿ ಔಷಧಿಗಳ ಜೋಡಣೆಯ ಉಸ್ತುವಾರಿ ನೋಡುತ್ತಿದ್ದ ಚರಣ್ ರೈಯವರ ಸ್ನೇಹಿತ ನವೀನ್ ಕುಲಾಲ್ರವರು ಒಳಗೆ ಇದ್ದಂತೆಯೇ ಹೊರಗಡೆ ಚರಣ್ರಾಜ್ ರೈಯವರ ಮೇಲೆ ದಾಳಿ ನಡೆದಿತ್ತು. ಅವರು ತಡೆಯಲು ಹೋಗುತ್ತಿದ್ದಂತೆಯೇ ಗಂಭೀರ ಗಾಯಗೊಂಡಿದ್ದ ಚರಣ್ರಾಜ್ ರೈ ಕುಸಿದು ಬಿದ್ದು ಅಲ್ಲಿಯೇ ಮೃತಪಟ್ಟಿದ್ದಾರೆ.
ಇನ್ನು ಕೊಲೆ ಪ್ರಕರಣದ ಪ್ರತ್ಯಕ್ಷದರ್ಶಿ ನವೀನ್ ಕುಲಾಲ್ ನೀಡಿದ ದೂರಿನಂತೆ ಪೊಲೀಸರು ಕಿಶೋರ್ ಪೂಜಾರಿ ಕಲ್ಲಡ್ಕ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
2019ರ ಸೆಪ್ಟೆಂಬರ್ 3ರಂದು ಸಂಪ್ಯ ಪೊಲೀಸ್ ಠಾಣೆಯ ಮುಂಭಾಗದಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಗಣೇಶೋತ್ಸವದಲ್ಲಿ ಯಕ್ಷಗಾನ ವೀಕ್ಷಿಸುತ್ತಿದ್ದ ವೇಳೆ ಕೊಲೆಯಾದ ಹಿಂದು ಜಾಗರಣ ವೇದಿಕೆ ಪುತ್ತೂರು ತಾಲೂಕು ಕಾರ್ಯದರ್ಶಿ ಕಾರ್ತಿಕ್ ಸುವರ್ಣ ಮೇರ್ಲರವರ ಒಡನಾಡಿಯಾಗಿದ್ದ ಕಿಶೋರ್ ಪೂಜಾರಿ ತಂಡದಿಂದ ರಿವೇಂಜ್ ಮರ್ಡರ್ ನಡೆದಿದೆ ಎಂದು ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
https://www.daijiworld.com/kannada/newsDisplay?newsID=63020&newsCategory=karvalli