ಮಂಗಳೂರು, ಜೂ 05 (DaijiworldNews/HR): ಸಿಂಜೀನ್ ಬಯೋಕಾನ್ ಸಂಸ್ಥೆಯ ಸಿಎಸ್ಆರ್ ಕಾರ್ಯಕ್ರಮದ ಅಡಿಯಲ್ಲಿ, ಮಂಗಳೂರು ಮಹಾನಗರ ಪಾಲಿಕೆ, ಹಾಗೂ ವನ ಟ್ರಸ್ಟ್ ಸಹಭಾಗಿತ್ವದಲ್ಲಿ ಮಂಗಳೂರಿನ ಪದು ಹೈಸ್ಕೂಲ್ ಪಕ್ಕದಲ್ಲಿ ರಾಷ್ಟ್ರೀಯ ಹೆದ್ದಾರಿಯ ಬದಿಯಲ್ಲಿ ಮಿಯಾವಾಕಿ ನಗರ ಅರಣ್ಯ ಯೋಜನೆಯನ್ನು ಪರಿಸರ ದಿನಾಚರಣೆ ಹಿನ್ನಲೆ ಇಂದು ಲೋಕಾರ್ಪಣೆಗೊಳಿಸಲಾಗಿದ್ದು, ಇಲ್ಲಿ160 ಜಾತಿಯ 2 ಸಾವಿರ ಗಿಡಗಳಿವೆ.
ಕಾರ್ಯಕ್ರಮದಲ್ಲಿ ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ್ ಕಾಮತ್, ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ, ಮನಪಾ ಮೇಯರ್ ಪ್ರೇಮಾನಂದ ಶೆಟ್ಟಿ, ಸ್ಥಳೀಯ ಕಾರ್ಪೋರೇಟರ್ ಶಕೀಲಾ ಕಾವ, ಪರಿಸರ ಅಧಿಕಾರಿ ಕೀರ್ತಿ ಕುಮಾರ್, ಬಯೋಕಾನ್ ಫೌಂಡೇಶನ್ ಮಿಷನ್ ಡಿರೆಕ್ಟರ್ ಅನುಪಮಾ ಶೆಟ್ಟಿ, ಸಿಂಜೀನ್ ಇಂಟರ್ನ್ಯಾಷನಲ್ ಸೈಟ್ ಹೆಡ್ ರಂಗರಾವ್, ಫಾ.ವಿನ್ಸೆಂಟ್ ಮೊಂತೇರೊ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ನಗರ ಅರಣ್ಯ ಯೋಜನೆಯ ಪ್ರಮುಖರಾದ ಜೀತ್ ಮಿಲನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಇದೇ ಸಂದರ್ಭ ನಗರ ಅರಣ್ಯ ಯೋಜನೆಯ ಜಾಗವನ್ನು ಸ್ವಚ್ಛಗೊಳಿಸಲು ಸಹಕರಿಸಿದ ಮಕ್ಕಳನ್ನು ಅಭಿನಂದಿಸಲಾಯಿತು.
ಸಿಂಜಿನ್ ಬಯೋಕಾನ್ ಸಂಸ್ಥೆಯ ಅಂಗಸಂಸ್ಥೆಯಾಗಿ ಕಳೆದ 30 ವರ್ಷಗಳಿಂದ ಕಾರ್ಯನಿರ್ವಹಿಸುತ್ತಿದ್ದು ಮಂಗಳೂರಿನಲ್ಲಿ ಸಂಸ್ಥೆಯ ವತಿಯಿಂದ 2ನೇ ಮಿಯಾವಕಿ ಯೋಜನೆಯನ್ನು ಲೋಕಾರ್ಪಣೆಗೊಳಿಸಲಾಗಿದೆ. ಈ ಹಿಂದೆ ರಾಮಕೃಷ್ಣ ಮಿಷನ್ ಸಹಭಾಗಿತ್ವದಲ್ಲಿ ನಗರ ಅರಣ್ಯ ಯೋಜನೆ ರೂಪಿಸಲಾಗಿತ್ತು.
ಸಿಂಜೀನ್ ಇಂಟರ್ನ್ಯಾಷನಲ್ ಕನ್ಸಟೆಂಟ್ ಎಚ್.ಆರ್ ಹೆಡ್ ಹಾಗೂ ಸಿಎಸ್ಆರ್ ಅಡ್ಮಿನ್ ರೊನಾಲ್ಡ್ ಮಸ್ಕರೇನಸ್ ಸ್ವಾಗತಿಸಿ, ಕಿಶೋರ್ ಶೆಟ್ಟಿ ವಂದಿಸಿದರು.