ಮಂಗಳೂರು, ಜೂ. 05 (DaijiworldNews/DB): ಪನಾಮ ದೇಶದ ಹಡಗಿನಲ್ಲಿದ್ದ ಚೀನಾದ ನಾವಿಕ ಸುರತ್ಕಲ್ನಿಂದ ಸುಮಾರು 70 ನಾಟಿಕಲ್ ಮೈಲು ದೂರದಲ್ಲಿ ಅರಬ್ಬೀ ಸಮುದ್ರದಲ್ಲಿ ಮೇ10ರಂದು ನಾಪತ್ತೆಯಾಗಿದ್ದಾರೆ.
ಚೀನಾದ ಕ್ಷು ಜುನ್ ಫೇಂಗ್ (52) ನಾಪತ್ತೆಯಾದವರು. ಚೀನಾದ ಝುನ್ ಪೇ ಬಂದರಿನಿಂದ ಸಿಂಗಾಪುರ ಮಾರ್ಗವಾಗಿ ಶ್ರೀಲಂಕಾಕ್ಕೆ ತೆರಳಿದ್ದ ಹಡಗು ಅಲ್ಲಿಂದ ಗುಜರಾತ್ನ ಮುಂಡ್ರಾ ಬಂದರಿಗೆ ಸಂಚರಿಸುತ್ತಿತ್ತು. ಮೇ10ರಂದು ರಾತ್ರಿ 1.10ರ ಸುಮಾರಿಗೆ ಆತ ಅರಬ್ಬೀ ಸಮುದ್ರದಲ್ಲಿ ಹಡಗು ತೆರಳುತ್ತಿದ್ದ ವೇಳೆ ನಾಪತ್ತೆಯಾಗಿದ್ದಾನೆ. ಈ ಕುರಿತು ಹಡಗಿನಲ್ಲಿದ್ದ ಇತರರು ಮೇ 28ರಂದು ಗುಜರಾತ್ ಪೊಲೀಸರಿಗೆ ದೂರು ನೀಡಿದ್ದು, ಅಲ್ಲಿಂದ ಪೊಲೀಸರು ಮಂಗಳೂರು ಕೋಸ್ಟ್ ಗಾರ್ಡ್ಗೆ ಮಾಹಿತಿ ನೀಡಿದ್ದಾರೆ. ಜೂ. 1ರಂದು ಮಂಗಳೂರಿನ ಕರಾವಳಿ ಕಾವಲು ಪೊಲೀಸ್ ಠಾಣೆಯಲ್ಲಿ ನಾಪತ್ತೆ ಪ್ರಕರಣ ದಾಖಲಾಗಿದೆ.
ನಾಪತ್ತೆಯಾಗಿರುವ ಚೀನೀ ಪ್ರಜೆಯ ಬಗ್ಗೆ ಮಾಹಿತಿ ಲಭ್ಯವಾದಲ್ಲಿ ಮಂಗಳೂರು ಕರಾವಳಿ ಪೊಲೀಸ್ ಠಾಣೆ 9480800574 ಅಥವಾ ಕರಾವಳಿ ಕಾವಲು ಪೊಲೀಸ್ ಕಂಟ್ರೋಲ್ ರೂಂ 0820-2538100 ಸಂಪರ್ಕಿಸಬಹುದು ಎಂದು ಕರಾವಳಿ ಕಾವಲು ಪೊಲೀಸರು ಮನವಿ ಮಾಡಿದ್ದಾರೆ.