ಕಾರ್ಕಳ, ಜೂ. 05 (DaijiworldNews/DB): ಕಸ ವಿಲೇವಾರಿ ಮಾಡುವ ಮಹಿಳೆಗೆ ನಿಂದಿಸಿದ ಆರೋಪದಡಿ ಮುಡಾರು ಗ್ರಾಪಂ ಅಭಿವೃದ್ದಿ ಅಧಿಕಾರಿ ಹಾಗೂ ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕಿ ವಿರುದ್ದ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಡಾರು ಗ್ರಾಪಂ ಎಸ್ಎಲ್ಆರ್ಎಂ ಘಟಕದಲ್ಲಿ ಕಸ ವಿಲೇವಾರಿ ಕೆಲಸ ನಿರ್ವಹಿಸುತ್ತಿರುವ ಪರನೀರು ದರ್ಖಾಸು ಹೌಸ್ ನಿವಾಸಿ ಗಿರಿಜಾ ಎಂಬಾಕೆ ದೂರು ನೀಡಿದ್ದಾರೆ. ನಲ್ಲೂರು ಗ್ರಾಮದ ಪ್ರತಿಮಾ, ಸರಿತಾ ಹಾಗೂ ಸುಧೀರ್ ಅವರೊಂದಿಗೆ ನಾನು ಮುಡಾರು ಗ್ರಾಪಂಗೆ ಸೇರಿದ ಎಸ್ಎಲ್ಆರ್ಎಂ ಘಟಕದಲ್ಲಿ ಕಸ ವಿಲೇವಾರಿ ಕೆಲಸನಿರ್ವಹಿಸುತ್ತಿದ್ದೇನೆ. ಕಸ ವಿಲೇವಾರಿ ವಿಚಾರವಾಗಿ ಮುಡಾರು ಗ್ರಾಪಂ ಅಭಿವೃದ್ದಿ ಅಧಿಕಾರಿ ರಮೇಶ್ ಹಾಗೂ ಎಸ್ಎಲ್ಆರ್ಎಂ ಘಟಕದ ಮೇಲ್ವಿಚಾರಕಿ ಮಾಧವಿ ವಿನಾಕಾರಣ ನನ್ನ ಮೇಲೆ ಅತೃಪ್ತಿ ವ್ಯಕ್ತಪಡಿಸಿ ನಮಗೆ ಅವಾಚ್ಯವಾಗಿ ನಿಂದಿಸಿದ್ದಾರೆ. ಅಲ್ಲದೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಕಳೆದ ಮೂರು ಸಭೆಗಳಲ್ಲಿ ಸಾರ್ವಜನಿಕರು ಹಾಗೂ ಪಂಚಾಯತ್ ಸದಸ್ಯರ ಎದುರು ನಮ್ಮ ಉದ್ಯೋಗದ ಬಗ್ಗೆ ಅತೃಪ್ತಿ ಹೊರ ಹಾಕಿ ನಮ್ಮನ್ನು ಅವಹೇಳನ ಮಾಡಿದ್ದಾರೆ. ಅಲ್ಲದೆ ಮೇ 31ರಂದು ನಡೆದ ಎಸ್ಎಲ್ಆರ್ಎಂ ಸಭೆ ಕರೆದು ನಮ್ಮನ್ನು ನಿಂದನೆ ಮಾಡಿದ್ದಾರೆ. ಸರಿಯಾಗಿ ಕಸ ವಿಲೇವಾರಿ ಮಾಡದೆ ಗಲೀಜು ಮಾಡುತ್ತೀರಿ ಎಂದು ಅವಹೇಳನ ಮಾಡುತ್ತಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ. ಗಿರಿಜಾ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.