ಉಡುಪಿ, ಜೂ 04 (DaijiworldNews/HR): ಸಿದ್ದರಾಮಯ್ಯಗೆ ಆರೆಸ್ಸೆಸ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆರೆಸ್ಸೆಸ್ ಚಡ್ಡಿ ಸಂಸ್ಕೃತಿ ಬಿಟ್ಟು ಪ್ಯಾಂಟಿಗೆ ಬಂದು ಬಹಳ ಸಮಯವಾಯಿತು. ಈಗ ನಮ್ಮ ಗಣವೇಶ ಅಂಗಿ ಪ್ಯಾಂಟ್ ಆಗಿದೆ. ಸಿದ್ದರಾಮಯ್ಯ ರಾಜಕೀಯ ಕಾರಣಕ್ಕೆ ಹೀಗೆ ಮಾತನಾಡುತ್ತಾರೆ. ಆ ಚಡ್ಡಿ ಇದ್ದದ್ದರಿಂದ ದೇಶದಲ್ಲಿ ಒಳ್ಳೆಯ ವಾತಾವರಣ ಇದೆ. ಆರೆಸ್ಸೆಸ್ ಇಲ್ಲದೇ ಇರುತ್ತಿದ್ದರೆ ದೇಶದ ಪರಿಸ್ಥಿತಿ ಊಹಿಸಲೂ ಸಾಧ್ಯವಾಗುತ್ತಿರಲಿಲ್ಲ. ಆರೆಸ್ಸೆಸ್ ಸಿದ್ದರಾಮಯ್ಯಗೆ ಏನು ಮಾಡಿದೆಯೋ ಗೊತ್ತಿಲ್ಲ ಎಂದು ಸಿದ್ದರಾಮಯ್ಯಗೆ ಉಡುಪಿ ಶಾಸಕ ರಘುಪತಿ ಭಟ್ ತಿರುಗೇಟು ನೀಡಿದ್ದಾರೆ.
ಆರೆಸ್ಸೆಸ್ ಚಡ್ಡಿ ಅಭಿಯಾನಕ್ಕೆ ಕರೆ ಕೊಟ್ಟಿರುವ ಸಿದ್ದರಾಮಯ್ಯ ವಿಚಾರದ ಬಗ್ಗೆ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಅವರು, ದೇಶಭಕ್ತರ ತಯಾರು ಮಾಡುವ ಸಂಸ್ಥೆ ಆರೆಸ್ಸೆಸ್ ರಾಷ್ಟ್ರೀಯತೆ ಮತ್ತು ಒಳ್ಳೆಯ ಶಿಕ್ಷಣ ಕೊಡುತ್ತಿರುವುದೇ ಆರೆಸ್ಸೆಸ್. ಆರೆಸ್ಸೆಸ್ ಇರುವುದರಿಂದ ಸಿದ್ದರಾಮಯ್ಯನ ಬೇಳೆ ಬೆಳೆಯುತ್ತಿಲ್ಲ. ಆರೆಸ್ಸೆಸ್ ಏನು ಎಂಬುದು ಇಡೀ ವಿಶ್ವಕ್ಕೇ ಗೊತ್ತು ಎಂದರು.
ಎಲ್ಲಾ ಮಸೀದಿಗಳಲ್ಲಿ ಶಿವಲಿಂಗ ಹುಡುಕಬೇಡಿ ಎಂದು ಕರೆಕೊಟ್ಟಿರುವ ಮೋಹನ್ ಭಾಗವತ್ ಹೇಳಿದ್ದನ್ನ ಖಂಡಿತವಾಗಿ ಎಲ್ಲರೂ ಕೇಳುತ್ತಾರೆ. ಎಲ್ಲಾ ಮಸೀದಿಗಳನ್ನು ಹುಡುಕಲು ಹೋಗಬೇಡಿ ಎಂದು ಮೋಹನ್ ಭಾಗವತ್ ಹೇಳಿದ್ದಾರೆ. ಈಗ ಇರುವುದನ್ನು ಸರಿ ಮಾಡಿಕೊಳ್ಳೋಣ ಎಂಬುದು ಅದರ ಅರ್ಥ ಕೆಲವು ಕುರುಹುಗಳು ಸಿಕ್ಕಾಗ ಭಾವನೆಗೆ ದಕ್ಕೆ ಆಗುತ್ತದೆ . ನಮ್ಮ ಮೂಲಸ್ಥಾನಕ್ಕಾಗಿ ಹುಡುಕಿಕೊಂಡು ಹೋಗಿ ಜೀರ್ಣೋದ್ಧಾರ ಮಾಡುತ್ತೇವೆ ಎಂದಿದ್ದಾರೆ.
ಉಡುಪಿಯ ಹಿಜಾಬ್ ವಿವಾದಕ್ಕೆ ಸಿಲುಕಿದ್ದ ಕಾಲೇಜಿನ ವಿಧ್ಯಾರ್ಥಿ ಸಾಧಕರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಭಟ್, 'ಕಾಲೇಜಿನಲ್ಲಿ ಹಿಜಬ್ ತೊಡುವ ವಿಚಾರಕ್ಕೆ ರಾಷ್ಟ್ರಾದ್ಯಂತ ಚರ್ಚೆಗಳಾಗಿದ್ದ ನಮ್ಮ ಕಾಲೇಜು ಪ್ರಖ್ಯಾತಿ ಮತ್ತು ಕುಖ್ಯಾತಿಗೆ ಒಳಗಾಗಿತ್ತು. ಒತ್ತಡದ ಮಧ್ಯೆ ನಮ್ಮ ಮಕ್ಕಳು ಉತ್ತಮ ಶೈಕ್ಷಣಿಕ ಸಾಧನೆ ಮಾಡಿದ್ದಾರೆ. ಪರೀಕ್ಷೆ ಬರೆಯುವಾಗ ಕಾಲೇಜು ಆವರಣದಲ್ಲಿ ಗೊಂದಲಮಯ ವಾತಾವರಣ ಇತ್ತು. ನಮ್ಮ ವಿದ್ಯಾರ್ಥಿನಿ ಗಾಯತ್ರಿ ಎಸ್ ಎಸ್ ಎಲ್ಸಿಯಲ್ಲಿ 625 ಅಂಕ ಗಳಿಸಿದ್ದಾಳೆ. 10 ವಿದ್ಯಾರ್ಥಿಗಳಿಗೆ ಆರುನೂರಕ್ಕೂ ಹೆಚ್ಚು ಅಂಕ ಸಿಕ್ಕಿದೆ. ಅನೇಕ ವಿದ್ಯಾರ್ಥಿಗಳು ಡಿಸ್ಟ್ರಿಂಕ್ಷನ್ ಪಡೆದಿದ್ದಾರೆ ಎಂದರು.
ಕಾಲೇಜಿನ ಹೊರಗೆ ಗೊಂದಲ ಇತ್ತು ಎಂಬುದು ಸಾಭೀತಾಗಿದೆ. ಕಾಲೇಜಿನ ಅಡ್ಮಿಶನ್ ಈ ವರ್ಷ ಹೆಚ್ಚಾಗಿದೆ. ಎಲ್ಲಾ ಧರ್ಮದ ವಿದ್ಯಾರ್ಥಿನಿಯರು ಕಾಲೇಜಿಗೆ ಸೇರಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ನಮ್ಮ ಕಾಲೇಜಿನ ಬೇಡಿಕೆ ಹೆಚ್ಚಾಗಿದೆ. ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್ ಹೊಸ ವಿಭಾಗ ಆರಂಭಿಸಲಾಗಿದೆ. ಕಾಮರ್ಸ್ ನಲ್ಲೂ ಕಂಪ್ಯೂಟರ್ ಸೈನ್ಸ್ ವಿಭಾಗ ಅರಂಭಿಸಿದ್ದೇವೆ. ಮುಸಲ್ಮಾನ ವಿದ್ಯಾರ್ಥಿನಿಯರ ಸಂಖ್ಯೆ ಕೂಡ ಈ ಬಾರಿ ಹೆಚ್ಚಾಗಿದೆ. ಟಿವಿ ಚರ್ಚೆಯಲ್ಲಿ ಕುಳಿತವರು ಉಡುಪಿಯ ಸೌಹಾರ್ದತೆ ಬಗ್ಗೆ ಏನೇನೋ ಮಾತನಾಡಿರಬಹುದು . ಉಡುಪಿಯಲ್ಲಿ ಸದಾ ಸೌಹಾರ್ದತೆ ಇದೆ ಎಂಬುದು ಸಾಬೀತಾಯಿತು ಎಂದಿದ್ದಾರೆ.
ಉಡುಪಿಯಲ್ಲಿ ಹೊಸ 4 ಕಾಲೇಜುಗಳಿಗೆ ಇಸ್ಲಾಂ ಸಮುದಾಯದ ಸಂಸ್ಥೆಗಳು ಅರ್ಜಿ ಹಾಕಿದ್ದಾರೆ. ಹೊಸ ಕಾಲೇಜುಗಳ ನಿರ್ಮಾಣ ಬೆಳವಣಿಗೆ, ಧರ್ಮದ ಆಚರಣೆ ಬೇಕೆ ಬೇಕು ಅನ್ನುವವರು ಅಲ್ಲೇ ಕಲಿಯಿರಿ. ಅಷ್ಟು ಮಡಿವಂತಿಕೆ ಇದ್ದರೆ ನಿಮ್ಮದೇ ಒಂದು ಕಾಲೇಜು ಮಾಡಿಕೊಳ್ಳಿ ಎಂದು ಮೊದಲೇ ಹೇಳಿದ್ದೆ. ಹಿಜಬ್ , ಬುರ್ಖಾ ಹಾಕಿಕೊಂಡು ಮುಖವನ್ನು ಮುಚ್ಚಿಕೊಂಡು ಬೇಕಾದರೆ ಹೋಗಲಿ ಅಭ್ಯಂತರ ಇಲ್ಲ ಅವರು ಸಮಾಜದಿಂದ ಬೇರೆ ಆಗುತ್ತಾರೆ ಹೌದು ಆದರೆ ಅವರ ಮಾನಸಿಕತೆ ಹಾಗೆ ಇರುವುದರಿಂದ ನಾವು ಏನು ಮಾಡಲಿಲ್ಲ. ಒಳ್ಳೆಯ ವ್ಯವಸ್ಥೆಯನ್ನು ಹದಗೆಡಿಸುವ ದಕ್ಕಿಂತ ಅವರು ಬೇರೆ ವ್ಯವಸ್ಥೆ ಮಾಡಿಕೊಂಡರೆ ಒಳ್ಳೆಯದು ಎಂದರು.
ಇನ್ನು ದಕ್ಷಿಣ ಕನ್ನಡ ಜಿಲ್ಲೆ ಉಪ್ಪಿನಂಗಡಿಯಲ್ಲಿ ಹಿಜಬ್ ವಿವಾದ ಸಂಬಂಧಿಸಿ ಪ್ರತಿಕ್ರಿಯಿಸಿದ ಅವರು, 'ಇವರೆಲ್ಲ ಕಾನೂನನ್ನು ಕೈಗೆತ್ತಿಕೊಳ್ಳುವವರು. ಸರ್ಕಾರದ, ಕೋರ್ಟ್ ಆದೇಶ ಸ್ಪಷ್ಟವಾಗಿ ಇದೆ. ಈಗಲೂ ಹೆಜ್ಜೆ ಬಗ್ಗೆ ಒತ್ತಡ ಹಾಕುವವರು ಕ್ರಿಮಿನಲ್ ಗಳು. ಮಾಧ್ಯಮಗಳ ಮೇಲೆ ಹಲ್ಲೆ ಮಾಡುವವರೆಗೆ ಮತಾಂಧರು ಬೆಳೆದಿದ್ದಾರೆ. ಇದಕ್ಕೆ ಸರಿಯಾದ ಉತ್ತರ ಸಮಾಜ ಕೊಡಬೇಕಾಗುತ್ತದೆ. ಕಾನೂನು ಕೈಗೆತ್ತಿಕೊಂಡು ಕೋರ್ಟ್ ಆದೇಶ ಧಿಕ್ಕರಿಸುವುದು ಮೂರ್ಖತನ ಎಂದಿದ್ದಾರೆ.
ಮಾಧ್ಯಮಗಳು ನಾಲ್ಕನೇ ಅಂಗ ಎಂದು ಮರೆತುಹೋಗಿದೆಯೇ? ಹಿಜಬ್ ಒಂದು ಅಂತರರಾಷ್ಟ್ರೀಯ ಷಡ್ಯಂತ್ರ. ಪೊಲೀಸರು ಸುಮೋಟೋ ಕೇಸು ದಾಖಲಿಸಬೇಕು ಹಿಜಬ್ ಧರಿಸಿ ಬರುವ ಮಕ್ಕಳ ಪೋಷಕರ ಮೇಲೆ ಕ್ರಿಮಿನಲ್ ಕೇಸು ಹಾಕಿ ಎಂದು ರಘುಪತಿ ಭಟ್ ಆಗ್ರಹಿಸಿದರು.