ಉಡುಪಿ, ಜೂ 04 (DaijiworldNews/HR): ಜನಸಾಮಾನ್ಯರಿಗೆ ಉತ್ತಮ ಗುಣಮಟ್ಟದ ಆರೋಗ್ಯಸೇವೆಯನ್ನು ನೀಡುವ ನಿಟ್ಟಿನಲ್ಲಿ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲ ಆರಂಭಿಸಿರುವ ಈ ವರ್ಷದ ಮಣಿಪಾಲ ಆರೋಗ್ಯ ಕಾರ್ಡ್ -2022ರ ನೋಂದಾವಣೆಗೆ ಉಡುಪಿಯ ಶಾಸಕರಾದ ರಘುಪತಿ ಭಟ್ ಇಂದು ಶನಿವಾರ, ಡಾ ಟಿ ಎಂ ಎ ಪೈ ಕಾನ್ಫರೆನ್ಸ್ ಹಾಲ್ ನಲ್ಲಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಶಾಸಕರು, ಕೆ ಎಂ ಸಿ ಆಸ್ಪತ್ರೆಯು ಜನರಿಗೆ ಉತ್ತಮವಾಗಿ ಸ್ಪಂದಿಸುತ್ತಿದೆ. ಡಾ ಟಿ ಎಂ ಎ ಪೈ ಯವರ ದೂರದೃಷ್ಟಿಯಿಂದ ಉಡುಪಿ ಜಿಲ್ಲೆಗೆ ಕೊಟ್ಟ ವರ ಈ ಆಸ್ಪತ್ರೆ . ಬಡವರು ಹಣಕಾಸಿಗೆ ಹೆದರಿ ಪ್ರಥಮ ಹಂತದ ಪರೀಕ್ಷೆಗೆ ಹೋಗಲ್ಲ. ಗುಣಪಡಿಸಲು ಅಸಾಧ್ಯವಾಗದ ಸ್ಥಿತಿ ಆಸ್ಪತ್ರೆ ಸೇರುವಾಗ ಈ ಕಾರ್ಡುಗಳು ಉಪಯೋಗಕ್ಕೆ ಬರುತ್ತವೆ. ಆರೋಗ್ಯ ಪ್ರತಿಯೊಬ್ಬರಿಗೂ ಅಗತ್ಯ. ನಮ್ಮ ಆರೋಗ್ಯದ ಬಗ್ಗೆ ನಾವು ಕಾಳಜಿ ಇಟ್ಟುಕೊಳ್ಳಬೇಕು. ಕಸ್ತೂರ್ಬಾ ಆಸ್ಪತ್ರೆ ಮಣಿಪಾಲವು ರಾಜ್ಯದ ಪ್ರತಿಷ್ಠಿತ ಆಸ್ಪತೆಯಾಗಿದ್ದು, ದೂರದ ಉತ್ತರ ಕನ್ನಡ, ಶಿವಮೊಗ್ಗ, ಚಿಕ್ಕಮಗಳೂರಿನಿಂದಲೂ ಬಹಳಷ್ಟು ದೊಡ್ಡ ಸಂಖ್ಯೆ ಮಂದಿ ಇಲ್ಲಿ ಚಿಕಿತ್ಸಗೆ ಬರುತ್ತಾರೆ. ಈ ಆರೋಗ್ಯ ಕಾರ್ಡ್ ಜನರಿಗೆ ಚಿಕಿತ್ಸೆ ಪಡೆಯಲು ಧೈರ್ಯ, ಆತ್ಮ ವಿಶ್ವಾಸ ಕೊಟ್ಟಿದೆ ಎಂದರು.
ಕಳೆದ ಕೋವಿಡ್ ಸಮಯದಲ್ಲಿ ಉಡುಪಿಯ ಡಾ. ಟಿಎಂಎಪೈ ಆಸ್ಪತ್ರೆಯನ್ನು ಕೋವಿಡ್ ರೋಗಿಗಳ ಚಿಕಿತ್ಸೆಗಾಗಿಯೇ ಮೀಸಲಿರಿಸಿದ್ದ ಆಡಳಿತ ಮಂಡಳಿಯನ್ನು ಅಭಿನಂದಿಸಿದರು. ಕಳೆದ 21 ವರ್ಷಗಳಿಂದ ಮಣಿಪಾಲ ಆರೋಗ್ಯಕಾರ್ಡ್ ಯೋಜನೆಯ ಮೂಲಕ ಲಕ್ಷಾಂತರ ಜನರಿಗೆ ರಿಯಾಯಿತಿ ದರದಲ್ಲಿ ಆರೋಗ್ಯ ಚಿಕಿತ್ಸೆ ನೀಡುತ್ತಿರುವ ಕ್ರಮವನ್ನು ಶ್ಲಾಘಿಸಿದರು.
ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಮಣಿಪಾಲ ಮಾಹೆಯ ಸಹ -ಕುಲಾಧಿಪತಿಗಳಾದ ಡಾ. ಹೆಚ್ ಎಸ್ ಬಲ್ಲಾಳ್, ಕಳೆದ 21 ವರ್ಷಗಳಿಂದ ನಾವು ಸಾಮಾಜಿಕ ಕಾಳಜಿಯೊಂದಿಗೆ ರಿಯಾಯಿತಿ ದರದಲ್ಲಿ ಲಕ್ಷಾಂತರ ಜನರಿಗೆ ಉತ್ತಮ ಗುಣಮಟ್ಟದ ಆರೋಗ್ಯ ಸೇವೆಗಳನ್ನು ಒದಗಿಸುತ್ತಿದ್ದೇವೆ. ವರ್ಷದಿಂದ ವರ್ಷಕ್ಕೆ ಸದಸ್ಯರ ನೋಂದಾವಣೆ ಹೆಚ್ಚುತ್ತಿರುವುದು ಮಣಿಪಾಲ ಆರೋಗ್ಯ ಕಾರ್ಡ್ನ ಜನಪ್ರಿಯತೆಯನ್ನು ತೋರಿಸುತ್ತದೆ. ಕಾರ್ಡ್ ಖರೀದಿಸಲು ಹೂಡಿಕೆ ಮಾಡಿದ ಹಣವನ್ನು ಕೇವಲ ಎರಡು ಅಥವಾ ಮೂರು ಸಲದ ಬಳಕೆಗಳಲ್ಲಿ ರಿಯಾಯಿತಿಯ ರೂಪದಲ್ಲಿ ಹಿಂದೆ ಪಡೆಯಬಹುದು ಎಂದು ಹೇಳಿದರು.
ಇನ್ನು ಮಾಹೆ ಮಣಿಪಾಲದ ಉಪಕುಲಪತಿ ಲೆಫ್ಟಿನೆಂಟ್ ಜನರಲ್ ಡಾ. ಎಂಡಿ ವೆಂಕಟೇಶ್ ಮಾತನಾಡಿ, 2000ನೇ ಇಸವಿಯಲ್ಲಿಅವಿಭಜಿತ ದಕ್ಸಿಣ ಕನ್ನಡ ಜಿಲ್ಲೆಯ ಜನರಿಗೆ ಆರಂಭಿಸಿದ ಈ ಯೋಜನೆ ಇಂದು ಕರಾವಳಿ ಕರ್ನಾಟಕದ ಮತ್ತು ಮಧ್ಯ ಕರ್ನಾಟಕದ ಸುಮಾರು 12ಕ್ಕೂ ಹೆಚ್ಚು ಜಿಲ್ಲೆಗಳಿಗೆ ವಿಸ್ತರಣೆ ಆಗಿದೆ. ಅಲ್ಲದೇ ಕೇರಳ, ಗೋವಾದಂತಹ ನೆರೆ ರಾಜ್ಯಗಳಿಗೂ ವಿಸ್ತರಣೆ ಆಗಿದೆ. ಅಲ್ಲದೇ ಈ ಸಲ ಹೊಸದಾಗಿ ಮೊಬೈಲ್ ಸಂಖ್ಯೆಗೆ ಮಿಸ್ ಕಾಲ್ ಕೊಡುವುದರ ಮೂಲಕ ಅಥವಾ ಆರೋಗ್ಯ ಎಂದು ವಾಟ್ಸ್ ಆಪ್ ಸಂದೇಶ ಕಳುಹಿಸುವುದರ ಮೂಲಕ ಯಾವುದೇ ಸಮಯದಲ್ಲಿ ಸಂಪೂರ್ಣ ಮಾಹಿತಿ ಪಡೆದುಕೊಳ್ಳುವ ವ್ಯವಸ್ಥೆ ಮಾಡಲಾಗಿದೆ ಎಂದು ಹೇಳಿದರು
2021ರ ಸಾಲಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಮಣಿಪಾಲ ಆರೋಗ್ಯಕಾರ್ಡ್ ಪ್ರತಿನಿಧಿಯನ್ನು ವೈದ್ಯಕೀಯ ಮತ್ತು ದಂತ ವಿಜ್ಞಾನಗಳ ಸಹ ಕುಲಪತಿ ಡಾ.ಪಿ.ಎಲ್.ಎನ್.ಜಿ.ರಾವ್ ಮತ್ತು ಮಾಹೆ ಮಂಗಳೂರು ಕ್ಯಾಂಪಸ್ನ ಸಹ ಉಪಕುಲಪತಿ ಡಾ ದಿಲೀಪ್ ಜಿ ನಾಯ್ಕ್ ಸನ್ಮಾನಿಸಿದರು.
ಡಾ.ವೆಂಕಟರಾಯ ಎಂ ಪ್ರಭು ಸಹ ಉಪಕುಲಪತಿ ಆರೋಗ್ಯ ವಿಜ್ಞಾನ ಇವರು, ಮಣಿಪಾಲ ಆರೋಗ್ಯಕಾರ್ಡ್ 2022ರ ಮಾಹಿತಿ ಕರ ಪತ್ರ ಬಿಡುಗಡೆ ಮಾಡಿದರು.
ಸಾರ್ವಜನಿಕರು ಕಸ್ತೂರ್ಬಾ ಆಸ್ಪತ್ರೆ ಮಣಿಪಾಲ, ಎಲ್ಲಾ ನೆಟ್ವರ್ಕ್ ಆಸ್ಪತ್ರೆಗಳು ಮತ್ತು ಅಧಿಕೃತ ಪ್ರತಿನಿಧಿಗಳಲ್ಲಿ ಮಣಿಪಾಲ ಆರೋಗ್ಯಕಾರ್ಡ್ ಅನ್ನು ನೋಂದಾಯಿಸಿಕೊಳ್ಳಬಹುದು.
ಮಣಿಪಾಲ ಕೆಎಂಸಿ ಡೀನ್ ಡಾ ಶರತ್ ಕೆ ರಾವ್ ಸ್ವಾಗತಿಸಿ, ಮಂಗಳೂರು ಕೆಎಂಸಿ ಡೀನ್ ಡಾ ಬಿ ಉನ್ನಿಕೃಷ್ಣನ್ ವಂದಿಸಿದರು. ಮಣಿಪಾಲ ಮತ್ತು ಮಂಗಳೂರಿನ ಹಿರಿಯ ಆಡಳಿತಾಧಿಕಾರಿಗಳು ಉಪಸ್ಥಿತರಿದ್ದರು.