ಮಂಗಳೂರು, ಜೂ 04 (DaijiworldNews/HR): ಆಯುಷ್ಯಾನ್ ಭಾರತ್ ಕಾರ್ಡ್ ಪಡೆಯದ ಕೊರಗ ಜನಾಂಗದವರನ್ನು ಪಟ್ಟಿ ಮಾಡಿ, ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತ್ ಮಟ್ಟದಲ್ಲಿಯೇ ಆಯುಷ್ಮಾನ್ ಕಾರ್ಡ್ಗಳನ್ನು ಉಚಿತವಾಗಿ ವಿತರಿಸುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಅವರು ಸೂಚಿಸಿದರು.
ಇಂದು ನಗರದ ಜಿಲ್ಲಾ ಪಂಚಾಯತ ಮಿನಿ ಸಭಾಂಗಣದಲ್ಲಿ ಮೂಲನಿವಾಸಿ ಕೊರಗ ಜನಾಂಗದವರ ಸಮಗ್ರ ಅಭಿವೃದ್ಧಿ ಕುರಿತು ಕೊರಗ ಸಮುದಾಯದ ಮುಖಂಡರೊಂದಿಗೆ ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಕೊರಗ ಸಮುದಾಯ ಹಾಗೂ ಪರಿಶಿಷ್ಟ ಪಂಗಡದವರಿಗೆ ಕೆಲವರಲ್ಲಿ ಆಯುಷ್ಮಾನ್ ಯೋಜನೆಯ ಬಗ್ಗೆ ಹೆಚ್ಚಿನ ಅರಿವಿಲ್ಲ ಆದ ಕಾರಣ ಆಯುಷ್ಮಾನ್ ಕಾಡ್೯ ಗೆ ತಗಲುವ ಅರ್ಜಿ ಶುಲ್ಕವನ್ನು ಪರಿಶಿಷ್ಟ ಜಾತಿ/ಪಂಗಡದ ಅನುದಾನದಲ್ಲಿ ಭರಿಸುವಂತೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ಸೂಚಿಸಿದರು.
ಕೊರಗ ಸಮುದಾಯದವರು ವೆನ್ಲಾಕ್ ಆಸ್ಪತ್ರೆಗೆ ದಾಖಲಾದಾಗ, ವಿವಿಧ ವೈದ್ಯಕೀಯ ಪರೀಕ್ಷೆಗಾಗಿ ಮಾರ್ಗದರ್ಶನ ನೀಡಲು ಕೊರಗ ಸಮುದಾಯದ ಒಬ್ಬ ವಿದ್ಯಾವಂತ ಯುವಕ ಅಥವಾ ಯುವತಿಯರನ್ನು ಸಹಾಯಕರನ್ನಾಗಿ ತಾತ್ಕಲಿಕವಾಗಿ ನಿಯೋಜಿಸಬೇಕು, ಆ ಸಮುದಾಯದಲ್ಲಿ ಆಧಾರ್ ಕಾರ್ಡ್, ಬಿ.ಪಿ.ಎಲ್ ಪಡಿತರ ಚೀಟಿ ಹೊಂದದವರ ಪಟ್ಟಿಯನ್ನು ತಯಾರಿಸಿ ಈ ತಿಂಗಳ ಅಂತ್ಯದೊಳಗೆ ನೀಡುವಂತೆ ತಿಳಿಸಿದರು.
ಕೊರಗ ಸಮುದಾಯದ ವಿದ್ಯಾವಂತ ಯುವಕ ಹಾಗೂ ಯುವತಿಯರ ಮಾಹಿತಿಯನ್ನು ಸಂಗ್ರಹಿಸಿ, ಅವರಿಗಿರುವ ಉದ್ಯೋಗವಕಾಶಗಳ ಬಗ್ಗೆ ಇದೇ ಜು.3ನೇ ವಾರದಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು ಹಾಗೂ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯಿಂದ ಕೊರಗ ಸಮಾವೇಶವನ್ನು ಹಮ್ಮಿಕೊಳ್ಳವಂತೆ ಸಲಹೆ ನೀಡಿದರು.
ಜಿಲ್ಲೆಯ ಗ್ರಾಮಾಂತರ ಹಾಗೂ ನಗರ ಪ್ರದೇಶದಲ್ಲಿನ ಮೂಲನಿವಾಸಿ ಕೊರಗ ಸಮುದಾಯದ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲು ಮಂಗಳೂರು ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್.ಘಟಕ ಅಥವಾ ಎಂ.ಎಸ್.ಡಬ್ಲ್ಯೂ ವಿಭಾಗದ ವತಿಯಿಂದ ಸಮೀಕ್ಷೆ ಕೈಗೊಳ್ಳಬೇಕು, ಕೊರಗ ಸಮುದಾಯದ ಮನೆ ನಿರ್ಮಾಣ ಯೋಜನೆಯಲ್ಲಿ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಮತ್ತು ನರೇಗಾ ಯೋಜನೆಯಲ್ಲಿನ ಸಹಾಯಧನವನ್ನು ಬಳಸಿಕೊಂಡು ಮನೆ ನಿರ್ಮಾಣ ಮಾಡುವಂತೆ ಹಾಗೂ ಎಲ್ಲಾ ಕೊರಗ ಸಮುದಾಯದವರು ನರೆಗಾ ಜಾಬ್ ಕಾರ್ಡ್ ಪಡೆಯುವಂತೆ ಕೋರಿದರು.
ಕೊರಗ ಜನಾಂಗದವರಿಗೆ ಸರ್ಕಾರದಿಂದ ಸಿಗುವ ಸೌಲಭ್ಯಗಳ ಮಾಹಿತಿ ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುವ ದೃಷ್ಟಿಯಿಂದ ಎಲ್ಲಾ ಗ್ರಾಮ ಪಂಚಾಯತ್ಗಳಲ್ಲಿ ವಿಶೇಷ ಗ್ರಾಮ ಸಭೆ ನಡೆಸುವಂತೆ ಎಲ್ಲಾ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದ ಅವರು, ಈ ಗ್ರಾಮ ಸಭೆಯಲ್ಲಿ ಅಜಲು ಪದ್ಧತಿ ನಿಷೇದ ಕಾಯ್ದೆ ಅನುಷ್ಠಾನದ ಬಗ್ಗೆ ಅರಿವು ಮೂಡಿಸಲು ಎಲ್ಲಾ ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ತಿಳಿಸಿದರು.
ಎಲ್ಲಾ ಪೋಷಕರು ತಮ್ಮ ಮಕ್ಕಳನ್ನು ಶಾಲೆಗಳಿಗೆ ಕಡ್ಡಾಯವಾಗಿ ದಾಖಲಿಸುವಂತೆ ಜಿಲ್ಲಾಧಿಕಾರಿಯವರು ಕೋರಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್, ಸಮಗ್ರ ಬುಡಕಟ್ಟು ಅಭಿವೃದ್ಧಿ ಯೋಜನೆಯ ಯೋಜನಾ ಸಮನ್ವಯಾಧಿಕಾರಿ ಹಾಗೂ ಕೊರಗ ಸಮುದಾಯದ ಮುಖಂಡರು ಭಾಗವಹಿಸಿದ್ದರು.