ಉಳ್ಳಾಲ, ಜೂ. 04 (DaijiworldNews/DB): ಚಿಟ್ಫಂಡ್ ಹಣವನ್ನು ಪಡೆದವರು ಮರಳಿ ನೀಡದೇ ಇದ್ದದ್ದರಿಂದ ಮನನೊಂದು ವೃದ್ದರೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಉಳ್ಳಾಲದ ಮಾಡೂರಿನಲ್ಲಿ ನಡೆದಿದೆ.
ಕೋಟೆಕಾರು ಗ್ರಾಮದ ಮಾಡೂರು ಸರ್ಕಾರಿ ಶಾಲೆ ಬಳಿಯ ನಿವಾಸಿ ಜಯರಾಮ ಶೆಟ್ಟಿ (71) ಆತ್ಮಹತ್ಯೆಗೆ ಶರಣಾದವರು. ಶನಿವಾರ ಬೆಳಗ್ಗೆ ಮನೆಯ ಕೋಣೆಯೊಳಗೆ ಫ್ಯಾನ್ಗೆ ನೈಲಾನ್ ಹಗ್ಗದಿಂದ ನೇಣು ಬಿಗಿದುಕೊಂಡು ಅವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತಿಗೆ ಚಹಾ ನೀಡಲೆಂದು ಪತ್ನಿ ಲೀನಾ ಜೆ. ಶೆಟ್ಟಿ ಅವರು ಕೋಣೆಯೊಳಗೆ ಹೋದಾಗ ಆತ್ಮಹತ್ಯೆ ಮಾಡಿರುಕೊಂಡಿರುವುದು ಗೊತ್ತಾಗಿದೆ.
ಮಾಡೂರು ಬಸ್ ತಂಗುದಾಣದ ಬಳಿ ಸೀಯಾಳ ಅಂಗಡಿ ಇಟ್ಟುಕೊಂಡಿರುವ ಜಯರಾಮ ಶೆಟ್ಟಿ ಚಿಟ್ಫಂಡ್ ವ್ಯವಹಾರ ನಡೆಸುತ್ತಿದ್ದರು. ಆದರೆ ಈ ವ್ಯವಹಾರದಲ್ಲಿ ಅವರಿಂದ ಹಣ ಪಡೆದುಕೊಂಡವರು ಹಣವನ್ನು ಹಿಂತಿರುಗಿಸಿಲ್ಲ. ಸಾಕಷ್ಟು ಬಾರಿ ಹಣ ಹಿಂತಿರುಗಿಸುವಂತೆ ಕೇಳಿದ್ದರಾದರೂ, ಹಣ ಪಡೆದುಕೊಂಡವರಿಂದ ಯಾವುದೇ ಪ್ರತಿಕ್ರಿಯೆ ಇಲ್ಲದ ಕಾರಣ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಅಲ್ಲದೆ ಸಾಕಷ್ಟು ನಷ್ಟಕ್ಕೊಳಗಾಗಿದ್ದ ಅವರು, ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಪತ್ನಿ ಲೀನಾ ದೂರು ದಾಖಲಿಸಿದ್ದಾರೆ.
ಉಳ್ಳಾಲ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕಳುಹಿಸಲಾಗಿದೆ.