ತಿರುವನಂತಪುರ,ಜ 11(MSP): ಸುಪ್ರೀಂ ತೀರ್ಪಿನ ನಂತರ ಶಬರಿಮಲೆಯ ಸನ್ನಿದಾನವನ್ನು ಪ್ರವೇಶಿಸಿ ಇತಿಹಾಸ ಬರೆದು, ಭಕ್ತರ ಕೆಂಗಣ್ಣಿಗೆ ಗುರಿಯಾಗಿದ್ದ ಮಹಿಳೆಯರಾದ ಬಿಂದು ಹಾಗೂ ಕನಕದುರ್ಗಾ ಇನ್ನು ತಮ್ಮ ಮನೆಗೆ ವಾಪಾಸ್ ಆಗಿಲ್ಲ ಎನ್ನುವ ವಿಚಾರ ತಿಳಿದುಬಂದಿದೆ.
ಅಯ್ಯಪ ಭಕ್ತರ ತೀವ್ರ ವಿರೋಧದ ನಡುವೆಯೂ ಬಿಂದು ಹಾಗೂ ಕನಕದುರ್ಗಾ ಎಂಬ ಇಬ್ಬರು ಮಹಿಳೆಯರು ಸದ್ದಿಲ್ಲದೆ ಶಬರಿಮಲೆ ದೇಗುವ ಪ್ರವೇಶಿಸುವ ಮೂಲಕ 800 ವರ್ಷಗಳ ಸಂಪ್ರದಾಯವನ್ನು ಮುರಿದು ಶಬರಿಮಲೆ ಪ್ರವೇಶ ಮಾಡಿ ಭಾರಿ ಸುದ್ದಿಗೆ ಗ್ರಾಸವಾಗಿದ್ದ ಅವರು ಇನ್ನೂ ಕೂಡ ತಮ್ಮ ನಿವಾಸಗಳಿಗೆ ಹಿಂದುರುಗಲು ಸಾಧ್ಯವಾಗಿಲ್ಲ.
ಶಬರಿಮಲೆ ದೇವಾಲಯ ಪ್ರವೇಶಿಸಿ ಅಯ್ಯಪ್ಪನ ದರ್ಶನ ಪಡೆದಿದ್ದ ಇಬ್ಬರು ಮಹಿಳೆಯರಿಗೆ ಜೀವ ಭಯ ಇದ್ದು, ಇವರಿಬ್ಬರ ಪ್ರವೇಶದ ಬಳಿಕ ಕೇರಳದಲ್ಲೂ ಪರಿಸ್ಥಿತಿ ಬೂದಿ ಮುಚ್ಚಿದ ಕೆಂಡದಂತಿದೆ. ಅಯ್ಯಪ್ಪನ ಭಕ್ತರಿಂದ ಇವರಿಗೆ ಜೀವ ಬೆದರಿಕೆ ಇದೆ ಎಂದು ಇವರಿಬ್ಬರೂ ಅಜ್ಞಾತ ಸ್ಥಳದಲ್ಲೇ ಇದ್ದಾರೆ.
ದೇಗುಲ ಪ್ರವೇಶಿಸಿರುವ ಬಗ್ಗೆ ಇವರಿಬ್ಬರು ಈ ಹಿಂದೆ ಪ್ರತಿಕ್ರಿಯಿಸಿದ್ದು, ನಮ್ಮ ಪ್ರವೇಶದಿಂದ ಇತರ ಮಹಿಳೆಯರಿಗೆ ಶಬರಿಮಲೆ ಪ್ರವೇಶಿಸುವುದು ಸುಲಭವಾಗಿದೆ. ನನಗೆ ನಮ್ಮ ಪೊಲೀಸ್ ಇಲಾಖೆ, ಕೇರಳ ಸರ್ಕಾರ, ಪ್ರಜಾಪ್ರಭುತ್ವ ಸಮಾಜದ ಮೇಲೆ ನಂಬಿಕೆ ಇದೆ. ಜೀವಬೆದರಿಕೆ ಬರಬಹುದೆನ್ನುವ ನಮಗೆ ತಿಳಿದಿತ್ತು ಈಗ ಅದೇ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದ್ದಾರೆ.