ಬೆಳ್ತಂಗಡಿ, ಜ 11(MSP):ಶಿವಮೊಗ್ಗ ಜಿಲ್ಲೆಯಲ್ಲಿ ಮಂಗನ ಕಾಯಿಲೆ ವ್ಯಾಪಕಗೊಳ್ಳುತ್ತಿರುವಂತೆಯೇ, ಕುಂದಾಪುರ ತಾಲೂಕಿನ ಹೊಸಂಗಡಿ, ಸಿದ್ದಾಪುರ ಹಾಗೂ ಕಾರ್ಕಳ ತಾಲೂಕಿನ ಹಿರ್ಗಾ ಗ್ರಾಮದಲ್ಲಿ ಮಂಗಗಳ ಶವ ಪತ್ತೆಯಾಗಿದ್ದು, ಕರಾವಳಿಯ ಉಭಯ ಜಿಲ್ಲೆಗಳಲ್ಲಿ ಮಂಗನ ಕಾಯಿಲೆ ಭೀತಿ ಹೆಚ್ಚಾಗಿದೆ.
ಈ ನಡುವೆ ಬೆಳ್ತಂಗಡಿ ತಾಲೂಕಿನ ಉಜಿರೆ ಪೇಟೆ ಸನಿಹ ಮಂಗನ ಶವವೊಂದು ಪತ್ತೆಯಾಗಿದೆ.ಸನಿಹದ ನಿವಾಸಿಗಳಿಗೆ ದುರ್ವಾಸನೆ ಬಂದಾಗ ಪರಿಶೀಲಿಸಿದಾಗ ಪೇಟೆಯಲ್ಲಿರುವ ದುರ್ಗಾ ಕಾಂಪ್ಲೆಕ್ಸ್ ಹಿಂಬದಿ ವಾನರ ಶವ ಪತ್ತೆಯಾಗಿದೆ. ಶವ ಉಬ್ಬಿದ್ದು ಹೀಗಾಗಿ ಮಂಗ ಮೃತಪಟ್ಟು ಮೂರು ನಾಲ್ಕು ದಿನ ಆಗಿರಬಹುದು ಎಂದು ಅಂದಾಜಿಸಲಾಗಿದೆ.
ಪಶು ವೈದ್ಯಾಧಿಕಾರಿ ಪರಿಶೀಲಿಸಿದ್ದು ಶವದ ಭಾಗವೊಂದನ್ನು ತೆಗೆದು ಹೆಚ್ಚಿನ ಪರೀಕ್ಷೆಗಾಗಿ ಶಿವಮೊಗ್ಗಕ್ಕೆ ರವಾನಿಸಲಾಗಿದೆ.