ಮಂಗಳೂರು, ಜೂ 04 (DaijiworldNews/MS): ವಿಶ್ವ ಸೈಕಲ್ ದಿನಾಚರಣೆಯ ಅಂಗವಾಗಿ ಮಂಗಳೂರು ಸ್ಮಾರ್ಟ್ ಸಿಟಿ ವತಿಯಿಂದ ಜೂ.03ರ ಶುಕ್ರವಾರ ಸಂಜೆ ಮಹಿಳಾ ಸೈಕಲ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿತ್ತು.
ಮಂಗಳೂರು ಮಹಾನಗರ ಪಾಲಿಕೆ ಕಚೇರಿ ಆವರಣದಿಂದ ಆರಂಭವಾಗಿ ಲೇಡಿಹಿಲ್ ನಲ್ಲಿರುವ ಮಂಗಳ ಕ್ರೀಡಾಂಗಣದಲ್ಲಿ ಮುಕ್ತಾಯಗೊಂಡಿತು.
ಮಹಾನಗರ ಪಾಲಿಕೆಯ ಉಪಮೇಯರ್ ಸುಮಂಗಲಾ ರಾವ್ ಹಾಗೂ ಸಂಚಾರಿ ಎಸಿಪಿ ಗೀತಾ ಕುಲಕರ್ಣಿ ಸೈಕಲ್ ರ್ಯಾಲಿಗೆ ಚಾಲನೆ ನೀಡಿದರು.
ಈ ವೇಳೆ ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಸೈಕಲ್ ಸವಾರಿ ಆರೋಗ್ಯಕ್ಕೂ ಅಲ್ಲದೆ ಸುಸ್ಥಿರ ಸಂಚಾರ ವ್ಯವಸ್ಥೆಗೆ ಅನುಕೂಲಕರ, ಪರಿಸರ ಸ್ನೇಹಿಯಾದ ಸೈಕಲ್ ಸವಾರಿ ಯುವಜನರಲ್ಲಿ ಮತ್ತಷ್ಟು ಜಾಗೃತಿ ಮೂಡಿಸುವಂತಾಗಬೇಕು ಎಂದರು.
ಶಾಸಕರಾದ ವೇದವ್ಯಾಸ್ ಕಾಮತ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಮೆಸ್ಕಾಂ ಮತ್ತು ಮಂಗಳೂರು ಸ್ಮಾರ್ಟ್ ಸಿಟಿ ವ್ಯವಸ್ಥಾಪಕ ನಿರ್ದೇಶಕರಾದ ಪ್ರಶಾಂತ್ ಕುಮಾರ್ ಮಿಶ್ರ, ತಾಂತ್ರಿಕ ವಿಭಾಗದ ಪ್ರಧಾನ ವ್ಯವಸ್ಥಾಪಕ ಅರುಣ್ ಪ್ರಭಾ, ವಿವಿಧ ವಿಭಾಗಗಳ ಎಂಜಿಯರ್ ಗಳಾದ ಚಂದ್ರಕಾಂತ್, ರಾಘವೇಂದ್ರ ಶೇಟ್, ಮಂಜು ಕೀರ್ತಿ, ಸುಧಾಕರ್, ಮಹಮದ್ ಸಾಬೀರ್ ಹಾಗೂ ಇತರರು ಭಾಗವಹಿಸಿದ್ದರು.
ಎಂ.ಎಸ್.ಸಿ.ಎಲ್ (ಸ್ಮಾರ್ಟ್ ಸಿಟಿ), ಮೆಸ್ಕಾಂ ಹಾಗೂ ಆಕ್ಸಿಸ್ ಬ್ಯಾಂಕ್ ನ ಸಿಬ್ಬಂದಿಗಳು ಸೇರಿದಂತೆ 40ಕ್ಕೂ ಹೆಚ್ಚಿನ ಮಹಿಳೆಯರು ಸೈಕಲ್ ರ್ಯಾಲಿಯಲ್ಲಿ ಭಾಗವಹಿಸಿದ್ದರು.
ಭಾಗವಹಿಸಿದ ಯುವತಿಯರು ಹಾಗೂ ಮಹಿಳೆಯರಿಗೆ ಪ್ರಮಾಣಪತ್ರಗಳನ್ನು ವಿತರಿಸಲಾಯಿತು.