ಬಂಟ್ವಾಳ, ಜೂ. 03 (DaijiworldNews/SM): ಬಂಟ್ವಾಳ ಸಮೀಪದ ಚೆಂಡ್ತಿಮಾರ್ ಎಂಬಲ್ಲಿ ಜೂ.1ರಂದು ಕಾರು ಮತ್ತು ಟ್ಯಾಂಕರ್ ನಡುವೆ ನಡೆದ ಅಪಘಾತದ ವೇಳೆ ಕಾರಿನಲ್ಲಿದ್ದ ನಗದು ಹಾಗೂ ದಾಖಲೆ ಪತ್ರಗಳು ಕಾಣೆಯಾಗಿರುವುದಾಗಿ ಬಂಟ್ವಾಳ ನಗರ ಠಾಣೆಗೆ ದೂರು ನೀಡಲಾಗಿದೆ.
ಬಿ.ಸಿ.ರೋಡ್-ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಚೆಂಡ್ತಿಮಾರ್ನಲ್ಲಿ ಮಧ್ಯಾಹ್ನ 3 ಗಂಟೆ ಸುಮಾರಿಗೆ ಅಪಘಾತ ಸಂಭವಿಸಿತ್ತು. ಘಟನೆಯಲ್ಲಿ ಕಾರಿನ ಮಾಲಕ ಮಡಂತ್ಯಾರು ನಿವಾಸಿ ರೋಷನ್ ಸೇರಾ ಸಾವನ್ನಪ್ಪಿದ್ದರು. ಅವರಲ್ಲಿದ್ದ ಸುಮಾರು 2 ಲಕ್ಷದ 3 ಸಾವಿರ ರೂ.ನಗದು ಹಾಗೂ ಕಾರಿನ ದಾಖಲೆ ಪತ್ರಗಳು ಕಾಣೆಯಾಗಿರುವುದಾಗಿ ಅವರ ಸಂಬಂಧಿಕರು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಅಪಘಾತದ ತೀವ್ರತೆಗೆ ಕಾರು ರಸ್ತೆಯಿಂದ ದೂರ ಬಿದ್ದಿದ್ದು ಜಖಂ ಗೊಂಡಿತ್ತು. ಅದರೊಳಗೆ ಸಿಲುಕಿದ ರೋಷನ್ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ರೋಶನ್ ಅವರು ಕೆಟರಿಂಗ್ ಉದ್ಯಮ ನಡೆಸುತ್ತಿದ್ದು, ಮಂಗಳೂರಿನಲ್ಲಿ ಮುನ್ನಾ ದಿನ ನಡೆದ ಕಾರ್ಯಕ್ರಮದ ಹಣವನ್ನು ಪಡೆದು ಮಡಂತ್ಯಾರಿಗೆ ಸಾಗುತ್ತಿದ್ದರು.
ಈ ಅಪಘಾತದ ದೃಶ್ಯ ಹೆದ್ದಾರಿಯ ಸಿಸಿ ಕ್ಯಾಮರದಲ್ಲಿ ದಾಖಲಾಗಿದ್ದು ವೈರಲ್ ಆಗಿದೆ.