ಮಂಗಳೂರು, ಜೂ 03 (DaijiworldNews/HR): ತುಳುನಾಡು ಮಾಣಿಕ್ಯ ಖ್ಯಾತಿಯ ನಟ ಅರವಿಂದ ಬೋಳಾರ್ ಅವರು ದೇವದಾಸ್ ಕಾಪಿಕಾಡ್ ನೇತೃತ್ವದ ಕರಾವಳಿಯ ಪ್ರಸಿದ್ಧ 'ಚಾಪರ್ಕ ಕಲಾವಿದರು' ನಾಟಕ ತಂಡಕ್ಕೆ ಮರು ಸೇರ್ಪಡೆಗೊಂಡಿದ್ದು, ರಂಗಾಭಿಮಾನಿಗಳು ಸಂಸತ ವ್ಯಕ್ತಪಡಿಸಿದ್ದಾರೆ.
ಒಂದೇ ನಾಟಕ ತಂಡದಲ್ಲಿ ತುಳು ಮನರಂಜನಾ ರಂಗದ ಅಪ್ರತಿಮ ನಟರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್ ಮತ್ತು ಭೋಜರಾಜ್ ವಾಮಂಜೂರು ಅವರನ್ನೊಳಗೊಂಡ ನಾಟಕ ಪ್ರದರ್ಶನವನ್ನು ನೋಡಬೇಕೆಂಬುದು ತುಳು ನಾಟಕ ಪ್ರೇಮಿಗಳ ಆಶಯವಾಗಿದ್ದು, ಅದರಂತೆ ಜೂನ್ 26 ಬಿ.ಸಿ.ರೋಡಿನ ಸ್ಪರ್ಶಾ ಕಲಾ ಮಂದಿರದಲ್ಲಿ ನಡೆಯಲಿರುವ 'ಕುರೆಪಟ್' ನಾಟಕದಲ್ಲಿ ಅರವಿಂದ್ ಬೋಳಾರ್ ಅಭಿನಯಿಸುತ್ತಿದ್ದಾರೆ.
ಆರಂಭದಲ್ಲಿ, ಚಾ ಪರ್ಕಾ ತಂಡವು ಕಾಪಿಕಾಡ್-ಬೋಳಾರ್-ವಾಮಂಜೂರು ಮತ್ತು ನವೀನ್ ಡಿ ಪಡೀಲ್ ಅವರನ್ನು ಒಳಗೊಂಡಿದ್ದು, ಇವರೆಲ್ಲರೂ ಹಾಸ್ಯ ನಾಟಕಗಳಲ್ಲಿ ಹೆಚ್ಚು ಬೇಡಿಕೆಯ ನಟರಾಗಿದ್ದರು. ಈ ನಾಲ್ವರು ಹುಟ್ಟು ಹಾಕಿದ ಟ್ರೆಂಡ್ ತುಳು ರಂಗಭೂಮಿಯನ್ನು ಮತ್ತಷ್ಟು ಎತ್ತರಕ್ಕೆ ಕರೆದುಕೊಂಡು ಹೋಗಿದೆ.
ಅರವಿಂದ್ ಬೋಳಾರ್ ಅವರನ್ನು ಮತ್ತೆ ಚಾ ಪರ್ಕಾ ತಂಡದಲ್ಲಿ ನೋಡುವುದು ಕನಸಾಗಿತ್ತು. ಇದೀಗ 'ಕುರೆಪಟ್' ನಾಟಕದ ಪೋಸ್ಟರ್ ನೋಡಿ ಆಶ್ಚರ್ಯದೊಂದಿಗೆ ಸಂತೋಷವಾಗಿದೆ. ದೇವದಾಸ್ ಕಾಪಿಕಾಡ್ ಹಾಗೂ ಚಾ ಪರ್ಕ ತಂಡದ ಆಡಳಿತ ಮಂಡಳಿಗೆ ನಾವು ಕೃತಜ್ಞತೆ ಸಲ್ಲಿಸುತ್ತೇವೆ. ಖಂಡಿತವಾಗಿಯೂ ಮುಂಬರುವ ವರ್ಷಗಳಲ್ಲಿ ಕಾಪಿಕಾಡ್ -ಬೋಳಾರ್-ವಾಮಂಜೂರು ಮೂವರನ್ನು ವೇದಿಕೆಯ ಮೇಲೆ ನೋಡಿ ಆನಂದಿಸಬಹುದು ಎಂದು ತುಳು ನಾಟಕ ಮತ್ತು ಚಲನಚಿತ್ರಗಳ ಅಭಿಮಾನಿ ನಳಿನಿ ಹೇಳಿದ್ದಾರೆ.