ಬೆಂಗಳೂರು, ಜ. 11(MSP):ಅರಬ್ಬಿ ಸಮುದ್ರದಲ್ಲಿ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ ನಲ್ಲಿದ್ದ ನಾಪತ್ತೆಯಾಗಿರುವ ಮೀನುಗಾರರ ಬಗ್ಗೆ ಕೆಲವು ಮಹತ್ವದ ಸುಳಿವುಗಳು ದೊರೆತಿದ್ದು, ನಮ್ಮ ನೌಕಾಪಡೆಯವರು ರೇಡಿಯೋ ಫ್ರೀಕ್ವೆನ್ಸಿ ಮೂಲಕ ಹುಡುಕಾಟ ನಡೆಸಿದ್ದಾರೆ ಎಂದು ಗೃಹ ಸಚಿವಎಂ.ಬಿ.ಪಾಟೀಲ್ ತಿಳಿಸಿದ್ದಾರೆ.
ಮೀನುಗಾರರ ನಾಪತ್ತೆ ವಿಚಾರ ಸೂಕ್ಷ್ಮ ವಿಷಯವಾದ ಕಾರಣ ಹೆಚ್ಚಿನ ವಿವರ ಬಹಿರಂಗ ಪಡಿಸಲು ಸಾಧ್ಯವಿಲ್ಲ ಎಂದು ಅವರು ಹೆಚ್ಚಿನ ಮಾಹಿತಿ ನೀಡಲು ನಿರಾಕರಿಸಿದರು.
ಕರಾವಳಿಯಲ್ಲಿ ನಾಪತ್ತೆಯಾಗಿರುವ ಮೀನುಗಾರರ ಪತ್ತೆಗೆ ಕೇಂದ್ರ ರಕ್ಷಣಾ ಪಡೆಯ ನೆರವು ಪಡೆಯಲಾಗಿದೆ. ಅಲ್ಲದೇ ಮಹಾರಾಷ್ಟ್ರ ಗೃಹ ಸಚಿವರ ಜತೆಗೂ ಮಾತುಕತೆ ನಡೆಸಿ ಸಹಕಾರ ಕೋರಿದ್ದೇವೆ ಎಂದು ಹೇಳಿದರು.
ಮಲ್ಪೆ ಬಂದರಿನಿಂದ ಡಿ.13ರಂದು ರಾತ್ರಿ 11 ಗಂಟೆಗೆ ಆಳ ಸಮುದ್ರ ಮೀನುಗಾರಿಕೆಗೆ ತೆರಳಿದ್ದ ಸುವರ್ಣ ತ್ರಿಭುಜ ಬೋಟ್ 15ರಂದು ಮಧ್ಯರಾತ್ರಿ ಏಕಾಏಕಿ ನಾಪತ್ತೆಯಾಗಿತ್ತು. ರಾತ್ರಿ 1 ಗಂಟೆವರೆಗೆ ಸಂಪರ್ಕದಲ್ಲಿದ್ದವರು ಮೀನುಗಾರರು ಬಳಿಕ ಕಾಣೆಯಾಗಿದ್ದರು. ಬೋಟ್ ಸಮೇತ ನಾಪತ್ತೆಯಾಗಿರುವ ಮೀನುಗಾರರ ಸುಳಿವು ನಾಪತ್ತೆಯಾಗಿ ತಿಂಗಳು ಸಮೀಪಿಸಿದರೂ ಪತ್ತೆಯಾಗಿಲ್ಲ.