ಬೆಳ್ತಂಗಡಿ, ಜೂ 02 (DaijiworldNews/HR): ಸೌತಡ್ಕ ದೇವಸ್ಥಾನಕ್ಕೆ ಬಂದಿದ್ದ ಭಕ್ತರೊಬ್ಬರ ಬ್ಯಾಗ್ನಿಂದ ಲಕ್ಷಾಂತರ ರೂ. ಮೌಲ್ಯದ ಚಿನ್ನಾಭರಣ ಕಳವು ಗೈದ ಆರೋಪದಲ್ಲಿ ಮಹಿಳೆಯೊಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಬಂಧಿತ ಆರೋಪಿಯನ್ನು ಗದಗ ಜಿಲ್ಲೆಯ ಕುಷ್ಟಗಿಚಾಲ್ ಮನೆ ನಿವಾಸಿಯಾದ ಭೀಮವ್ವ (63) ಎಂದು ಗುರುತಿಸಲಾಗಿದೆ.
ಶ್ರೀ ಕ್ಷೇತ್ರ ಸೌತಡ್ಕಕ್ಕೆ ದೇವರ ದರ್ಶನ ಪಡೆಯಲು ಬೆಳ್ತಂಗಡಿ ಮೂಲದ ಮುಂಬೈ ನಿವಾಸಿಯಾದ ಬಾಲಚಂದ್ರ ಡಿ ಎಂಬುವವರು ಸಂಸಾರ ಸಮೇತ ಬಂದಿದ್ದು, ಈ ವೇಳೆ ದೇವರ ದರ್ಶನ ಪಡೆದು ತೀರ್ಥ ಪ್ರಸಾದ ಪಡೆಯಲು ಸರತಿ ಸಾಲಿನಲ್ಲಿ ನಿಂತಿದ್ದ ಸಮಯದಲ್ಲಿ ಬಾಲಚಂದ್ರ ಅವರ ಪತ್ನಿಯ ಕೈಯಲ್ಲಿದ್ದ ವ್ಯಾನಿಟಿ ಬ್ಯಾಗ್ ನ ಜಿಪ್ ತೆರೆದು ಅದರಲ್ಲಿದ್ದ ವಜ್ರದ ನೆಕ್ಲೇಸ್, ಎರಡು ಉಂಗುರ, ಜುಮುಕಿ ಒಂದು ಜೊತೆ ಸೇರಿ ಸುಮಾರು ಮೂರು ಲಕ್ಷ ಮೌಲ್ಯದ ಚಿನ್ನಾಭರಣವನ್ನು ಕಳವು ಮಾಡಲಾಗಿದ್ದು, ಈ ಬಗ್ಗೆ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು.
ಇನ್ನು ಪ್ರಕರಣವನ್ನು ಕೈಗೆತ್ತಿಕೊಂಡ ಪೊಲೀಸ್ ಅಧೀಕ್ಷಕ ಋಷೀಕೇಶ್ ಸೋನಾವಣೆ ಮತ್ತು ಹೆಚ್ಚುವರಿ ಪೊಲೀಸ್ ಅಧೀಕ್ಷಕರಾದ ಕುಮಾರ್ ಚಂದ್ರ ರವರ ಮಾರ್ಗದರ್ಶನದಲ್ಲಿ ಪೊಲೀಸ್ ಉಪಾಧೀಕ್ಷಕ, ಬಂಟ್ವಾಳ ಉಪವಿಭಾಗ ಶಿವಂಶು ರಜಪೂತ್ ಮತ್ತು ಪೊಲೀಸ್ ವೃತ್ತ ನಿರೀಕ್ಷಕ, ಬೆಳ್ತಂಗಡಿ ವೃತ್ತ ಶಿವಕುಮಾರ್ ರವರ ನೇತೃತ್ವದಲ್ಲಿ ಪಿಎಸ್ಐ ಕೃಷ್ಣಕಾಂತ ಪಾಟೀಲ್ ರವರ ವಿಶೇಷ ತಂಡದ ಸಿಬ್ಬಂದಿಗಳಾದ, ಹೆಚ್ ಸಿ ಬೆನ್ನಿಚ್ಚನ್, ಹೆಚ್ ಸಿ ಪ್ರಶಾಂತ್, ಹೆಚ್ ಸಿ ರಾಹುಲ್, ಹೆಚ್ ಸಿ ಸತೀಶನಾಯ್ಕ ಜಿ, ಹೆಚ್ ಸಿ ಶೇಖರ್ ,ಹೆಚ್ ಸಿ ಕೃಷ್ಣಪ್ಪ, ಹೆಚ್ಸಿ ರವೀಂದ್ರ ಪಿ ಸಿ ಅನಿಲ್ ಕುಮಾರ್, ಚಾಲಕ ಎಪಿಸಿ ಲೋಕೇಶ್, ಮಪಿಸಿ ಸೌಭಾಗ್ಯ ಮತ್ತು ಜಿಲ್ಲಾ ಗಣಕ ಯಂತ್ರದ ವಿಭಾಗದ ಸಂಪತ್ ಮತ್ತು ದಿವಾಕರ ರವರು ಕಾರ್ಯಚರಣೆಯಲ್ಲಿ ಭಾಗವಹಿಸಿ ಗದಗ ಮೂಲದ ಮಹಿಳೆಯನ್ನು ಬಂಧಿಸಿದ್ದಾರೆ.