ಮಂಗಳೂರು, ಜೂ 02 (DaijiworldNews/MS): ಮಳಲಿಯ ಜಾಮಿಯಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಪ್ರಕರಣದ ಅರ್ಜಿಯ ವಿಚಾರಣೆಯನ್ನು ಮಂಗಳೂರಿನ ಮೂರನೇ ಹೆಚ್ಚುವರಿ ಸಿವಿಲ್ ನ್ಯಾಯಾಲಯ ಜೂ.೬ ಕ್ಕೆ ಮುಂದೂಡಿದೆ.
ಮಸೀದಿ ನವೀಕರಣ ಸಂದರ್ಭದಲ್ಲಿ ಶತಮಾನಗಳಷ್ಟು ಹಳೆಯದಾದ ದೇವಾಲಯವೊಂದರ ರಚನೆಯನ್ನು ಹೋಲುವ ಕುರುಹು ಪತ್ತೆಯಾದ ಹಿನ್ನೆಲೆಯಲ್ಲಿ ವಿವಾದ ಸೃಷ್ಟಿಯಾಗಿದೆ.
ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಸರಳಾಯ ಮತ್ತು ಮಳಲಿ ಮಸೀದಿ ಆಡಳಿತ ಮಂಡಳಿ ಪರ ಎನ್. ಪಿ ಶೆಣೈ ವಾದ ಮಂಡಿಸಿದರು. ಕಲಾಪ ಆರಂಭವಾಗುತ್ತಿದ್ದಂತೆ ವಾದ ಮಂಡಿಸಿದ ವಿಶ್ವ ಹಿಂದೂ ಪರಿಷತ್ ಪರ ವಕೀಲ ಚಿದಾನಂದ ಸರಳಾಯ, ವಿವಾದಿತ ಜಾಗದಲ್ಲಿ ಇರುವ ಹಳೆಯ ಕಟ್ಟಡದಲ್ಲಿ ದೇವಸ್ಥಾನದಂತಹ ರಚನೆ ಮತ್ತು ಕೆತ್ತನೆಗಳಿವೆ . ಈ ಹಿನ್ನಲೆಯಲ್ಲಿ ಜ್ಞಾನವ್ಯಾಪಿ ಮಾದರಿಯಲ್ಲಿ ಕೋರ್ಟ್ ಕಮಿಷನರ್ ಮೂಲಕ ಪುರಾತತ್ವ ಇಲಾಖೆಯ ಸಹಾಯದಲ್ಲಿ ಸರ್ವೇ ನಡೆಸಬೇಕು ಎಂದು ಕೆದಿಲಾಯ ಮನವಿ ಮಾಡಿದರು. ಈ ಪ್ರಕರಣದಲ್ಲಿ ಸರಕಾರವನ್ನು ಕೂಡಾ ಪಕ್ಷಕಾರನನ್ನಾಗಿ ಮಾಡಬೇಕು ಎಂದು ಅರ್ಜಿ ಸಲ್ಲಿದರು. ಅಲ್ಲದೆ ಈಗಾಗಲೇ ಸ್ಥಳೀಯ ಗ್ರಾ.ಪಂ ಪಿಡಿಓ ಅವರು ಅನುಮತಿಯನ್ನು ತಡೆಹಿಡಿದಿದ್ದಾರೆ ಎಂದು ಹೇಳಿದರು.
ಎನ್. ಪಿ ಶೆಣೈ ವಾದ ಮಂಡಿಸಿ ಮಳಲಿ ಮಸೀದಿಯಲ್ಲಿ ಯಾವ ದೇವರಿದ್ದನು ? ದೇವಸ್ಥಾನದ ಇತಿಹಾಸ ಏನು? ಎಂಬ ಬಗ್ಗೆ ಅರ್ಜಿದಾರರು ಯಾವುದೇ ಸಾಕ್ಷ್ಯ ನೀಡಿಲ್ಲ. ಆದರೆ ಅಲ್ಲಿ ಮಸೀದಿ 700 ವರ್ಷಗಳಿಂದ ಮಸೀದು ಇತ್ತು ಎನ್ನುವುದಕ್ಕೆ ದಾಖಲೆ ಇದೆ. ನವೀಕರಣಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಸರು ವಿಚಾರಣೆಯನ್ನು ಜೂ.೬ ಕ್ಕೆ ಮುಂದೂಡಿದರು.