Karavali
ಮಂಗಳೂರು: ರೈತರ ಮಕ್ಕಳಿಗೆ ವಿದ್ಯಾನಿಧಿ ತಲುಪಿರುವುದು ಸಮಾಧಾನ ತಂದಿದೆ - ಸಿಎಂ ಬೊಮ್ಮಾಯಿ
- Thu, Jun 02 2022 08:14:09 AM
-
ಮಂಗಳೂರು, ಜೂ 02 (DaijiworldNews/MS):ಅಧಿಕಾರ ಸ್ವೀಕರಿಸಿದ ನಾಲ್ಕೇ ಗಂಟೆಗಳಲ್ಲಿ ರೈತರ ಮಕ್ಕಳ ವಿದ್ಯಾಭ್ಯಾಸಕ್ಕೆ ಉತ್ತೇಜನ ನೀಡುವ ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಘೋಷಿಸಲಾಗಿತ್ತು. ಆ ಯೋಜನೆಯ ಫಲವಿಂದು ರೈತರ ಮಕ್ಕಳಿಗೆ ತಲುಪಿರುವುದು ಅತ್ಯಂತ ಸಮಾಧಾನ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದರು.
ಅವರು ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆ ಫಲಾನುಭವಿಗಳೊಂದಿಗೆ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ತಾಲೂಕಿನ ಆಳ್ವಾಸ್ ಕಾಲೇಜಿನಲ್ಲಿ ಜೂ.1ರ ಬುಧವಾರ ಮುಖ್ಯಮಂತ್ರಿಗಳು ಸಂವಾದ ನಡೆಸಿ ಹಾಗೂ ಮಂಗಳೂರು ತಾಲೂಕಿನ ಉರ್ವದಲ್ಲಿ ನಿರ್ಮಿಸಲಾಗಿರುವ 33/11ಕೆವಿ ಗ್ಯಾಸ್ ಇನ್ಸುಲೇಟೆಡ್ ಉಪಕೇಂದ್ರವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ವಿದ್ಯಾರ್ಥಿಗಳು ಯೋಜನೆಯ ಸದುಪಯೋಗ ಪಡೆದುಕೊಂಡಿರುವುದನ್ನು ಅರಿತು ನನ್ನ ಶಕ್ತಿ ಇಮ್ಮಡಿಯಾಗಿದೆ. ನಾವೆಲ್ಲರೂ ಸೇರಿ ಯುವಕರನ್ನು ಬೆಳೆಸಿ, ನವ ಭಾರತಕ್ಕಾಗಿ ನವ ಕರ್ನಾಟಕ ನಿರ್ಮಾಣ ಮಾಡೋಣ ಎಂದು ಮುಖ್ಯಮಂತ್ರಿಗಳು ಕರೆ ನೀಡಿದರು.
ಹಿಂದೆ ಹೆಚ್ಚುತ್ತಿರುವ ಜನಸಂಖ್ಯೆ ದೇಶದ ಅಭಿವೃದ್ಧಿಗೆ ಮಾರಕ ಎಂಬ ಚಿಂತನೆಯಿತ್ತು. ಆದರೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಅಧಿಕಾರಕ್ಕೆ ಬಂದ ನಂತರ ದೇಶದ 130 ಕೋಟಿ ಜನರು, ಅದರಲ್ಲೂ ಶೇ. 46 ರಷ್ಟಿರುವ ಯುವಜನರು ನಮ್ಮ ದೇಶವನ್ನು ಮುನ್ನಡೆಸುವ ಶಕ್ತಿ ಎಂದರು. ಬೇರೆ ಯಾವ ದೇಶದಲ್ಲಿಯೂ ಈ ಪ್ರಮಾಣದಲ್ಲಿ ಯುವಜನರ ಸಂಖ್ಯೆ ಇಲ್ಲ ಎಂದು ಮುಖ್ಯಮಂತ್ರಿಗಳು ತಿಳಿಸಿದರು.
‘ನಿಮ್ಮ ವಯಸ್ಸು ವಿದ್ಯಾರ್ಜನೆ ಮಾಡುವ, ಆಟ-ಪಾಠದಲ್ಲಿ ತೊಡಗಿಸಿಕೊಳ್ಳುವ ವಯಸ್ಸು. ಜಗತ್ತನ್ನು ತಿಳಿದುಕೊಳ್ಳುವ ವಯಸ್ಸು. ಆದ್ದರಿಂದ ನೀವು ತಾರ್ಕಿಕ ಚಿಂತನೆ ಮಾಡಬೇಕು. ಪ್ರಶ್ನೆಗಳನ್ನು ಕೇಳಿ ಉತ್ತರಗಳನ್ನು ಕಂಡುಕೊಳ್ಳಬೇಕು. ತಾರ್ಕಿಕ ಚಿಂತನೆಯಿಂದ ಉನ್ನತ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಸಾಧನೆ ಮಾಡಲು ಸಾಧ್ಯವಾಗುವುದು ಎಂದು ಅವರು ತಿಳಿಸಿದರು.
ರೈತ ಮಣ್ಣು, ಬಿಸಿಲು, ಕಲ್ಲು, ಮಳೆ, ಗಾಳಿ ಚಳಿಯೆನ್ನದೆ ದುಡಿಯುತ್ತಾನೆ. ಅವನ ಕೈಯ ರೇಖೆಗಳು ಅಳಿದರೂ ದುಡಿಮೆಯ ಮೂಲಕ ತನ್ನ ಹಣೆಬರಹ ಬರೆಯುತ್ತಾನೆ; ದೇಶದ ಹಣೆಬರಹವನ್ನೂ ಬರೆಯುತ್ತಾನೆ. ದೇವರು ಕಾರ್ಮಿಕರ ಶ್ರಮದಲ್ಲಿದ್ದಾನೆ; ರೈತರ ಬೆವರಿನಲ್ಲಿದ್ದಾನೆ ಎಂದು ಕವಿ ರವೀಂದ್ರನಾಥ ಟ್ಯಾಗೋರರು ಹೇಳಿದ್ದಾರೆ. ಇಂತರ ರೈತರ ಬಗ್ಗೆ ಗೌರವ ಇರಬೇಕು. ಬೆಲೆ ಕೊಡಬೇಕು. ಆದರೆ ರೈತ ಸಂಕಷ್ಟದಲ್ಲಿದ್ದಾನೆ. ಇದನ್ನು ಹಳ್ಳಿಗಳಿಗೆ ಭೇಟಿ ನೀಡಿದಾಗ ತಾವು ಕಣ್ಣಾರೆ ಕಂಡಿರುವುದಾಗಿ ಸೋದಾಹರಣವಾಗಿ ವಿವರಿಸಿದರು. ರೈತರ ಮಕ್ಕಳೂ ಉನ್ನತ ಸಾಧನೆ ಮಾಡಬೇಕು. ಆರ್ಥಿಕವಾಗಿ ಸಬಲರಾಗಬೇಕು ಎಂಬ ಉದ್ದೇಶದಿಂದ ಅಧಿಕಾರಕ್ಕೆ ಬಂದು ನಾಲ್ಕೇ ಘಂಟೆಯಲ್ಲಿ ಈ ಯೋಜನೆಯನ್ನು ಘೋಷಿಸಲಾಯಿತು ಎಂದು ಮುಖ್ಯಮಂತ್ರಿಗಳು ವಿವರಿಸಿದರು.
ದೇಶದ ಒಟ್ಟು ಆದಾಯಕ್ಕೆ ಶೇ. 30 ರಷ್ಟು ಜನರು ಮಾತ್ರ ಕೊಡುಗೆ ನೀಡುತ್ತಾರೆ. ಆದರೆ ಹೆಚ್ಚಿನ ಸಂಖ್ಯೆಯಲ್ಲಿ ಜನರು, ಅದರಲ್ಲೂ ಮಹಿಳೆಯರು ಆರ್ಥಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು. ಇದಕ್ಕಾಗಿ 4 ಲಕ್ಷ ಮಹಿಳೆಯರಿಗೆ ಉದ್ಯೋಗಾವಕಾಶ ಕಲ್ಪಿಸಲು ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕಾರ್ಮಿಕರಿಗಾಗಿ ಕಾರ್ಯಕ್ರಮಗಳನ್ನು ರೂಪಿಸಲಾಗುತ್ತಿದೆ ಎಂದು ತಿಳಿಸಿದರು.
21ನೇ ಶತಮಾನ ಜ್ಞಾನದ ಶತಮಾನ. ಆದ್ದರಿಂದ ವಿದ್ಯಾರ್ಥಿಗಳು ಪ್ರಾಮಾಣಿಕವಾಗಿ ಜ್ಞಾನಾರ್ಜನೆ ಮಾಡಿ ಉತ್ತಮ ಸಾಧನೆ ಮಾಡಬೇಕು. ಸ್ವಾಮಿ ವಿವೇಕಾನಂದರು ಹೇಳಿದಂತೆ ಸಾಧಕನಿಗೆ ಸಾವು ಅಂತ್ಯವಲ್ಲ. ಸಾವಿನ ನಂತರವೂ ಆತ ತನ್ನ ಸಾಧನೆಗಳ ಮೂಲಕ ಜೀವಂತ ಇರುತ್ತಾನೆ. ನೀವು ಕೂಡ ಇಂತಹ ಉನ್ನತ ಸಾಧನೆ ಮಾಡಬೇಕು. ಜನರು ನಿಮ್ಮನ್ನು ಪ್ರೀತಿಸುವಂತಹ, ಗೌರವಿಸುವಂತಹ ಸಾಧನೆ ಮಾಡಬೇಕು. ಆ ಮೂಲಕ ನಿಮ್ಮತನ ಉಳಿಸಿಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.
“ನನ್ನ ಹಣೆಬರಹ ನಾನೇ ಬರೆಯುತ್ತೇನೆ”; ತಂದೆ ತಾಯಿಗಳ ಕನಸು ನನಸು ಮಾಡುತ್ತೇನೆ ಎಂದು ನಿಮ್ಮ ಕೋಣೆಯ ಗೋಡೆಯಲ್ಲಿ ಬರೆದಿಡಿ. ಅದಕ್ಕೆ ತಕ್ಕಂತೆ ಹೆಚ್ಚಿನ ಪರಿಶ್ರಮ ವಹಿಸಿ, ಸಾಧನೆ ಮಾಡಿ ಎಂದು ಸಲಹೆ ನೀಡಿದರು.
ಹಣಕ್ಕಿಂತ ಸಮಯ ಮುಖ್ಯವಾಗಿದ್ದು, ವಿದ್ಯಾರ್ಥಿ ಜೀವನದಲ್ಲಿ ಸಮಯ ಸದುಪಯೋಗ ಪಡಿಸಿಕೊಳ್ಳಬೇಕು, ರಾಜ್ಯದ ಎಲ್ಲ ಪಾಲಿಟೆಕ್ನಿಕ್ ಕಾಲೇಜುಗಳನ್ನು ಉನ್ನತೀಕರಣಗೊಳಿಸಲು ನಿರ್ಧರಿಸಲಾಗಿದ್ದು, ಮೂರ್ನಾಲ್ಕು ತಿಂಗಳುಗಳಲ್ಲಿ ಈ ಪ್ರಕ್ರಿಯೆ ಪ್ರಾರಂಭವಾಗಲಿದೆ, ಆಳ್ವಾಸ್ ಶಿಕ್ಷಣ ಸಂಸ್ಥೆಯು ವಿಶ್ವಮಾನ್ಯವಾಗಿದೆ. ದೇಶ ಕಟ್ಟುವ ಶಕ್ತಿ ಆಳ್ವಾಸ್ ಸಂಸ್ಥೆಗೆ ಇದೆ ಎಂದು ಶ್ಲಾಘಿಸಿದರು.
ಮುಖ್ಯಮಂತ್ರಿ ರೈತರ ವಿದ್ಯಾನಿಧಿ ಯೋಜನೆಯ ಫಲಾನುಭವಿ ವಿದ್ಯಾರ್ಥಿಗಳೊಂದಿಗೆ ನಡೆದ ಸಂವಾದದಲ್ಲಿ ಮುಖ್ಯಮಂತ್ರಿ ಪಾಲ್ಗೊಂಡರು. ಇಂಜಿನಿಯರಿಂಗ್ ವಿದ್ಯಾರ್ಥಿ ಅಕ್ಷತಾ ಎಂ. ಮಾತನಾಡಿ ಯೋಜನೆಯ ಸಂಪೂರ್ಣ ಲಾಭ ಪಡೆದಿದ್ದು ಶೈಕ್ಷಣಿಕ ಉದ್ದೇಶಕ್ಕೆ ಬಳಸಿರುವುದಾಗಿ ತಿಳಿಸಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿದ್ಯಾರ್ಥಿ ಜಾಯ್ಸ್ ಟನ್ ಜೇಮ್ಸ್ ಅವರು ಮಾತನಾಡಿ, ಬೇರೆ ವಿದ್ಯಾರ್ಥಿವೇತನಕ್ಕೆ ಅರ್ಜಿ ಸಲ್ಲಿಸಿದ್ದೆ. ಆದರೆ ರೈತ ವಿದ್ಯಾ ನಿಧಿಗೆ ಸಂಬAಧಿಸಿದ ಯೋಜನೆಯ ಮೊತ್ತವನ್ನು ನಿರೀಕ್ಷಿಸಿರಲಿಲ್ಲ. ಬ್ಯಾಂಕ್ ಖಾತೆಯಲ್ಲಿ ಹಣ ನೋಡಿ ಖುಷಿಯಾಗಿತ್ತು ಎಂದರು.ಮೂಡುಬಿದಿರೆ ಜೈನ್ ಪ್ರೌಢಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿನಿ ಸಾನ್ವಿಕ ಶೆಟ್ಟಿ ಮುಖ್ಯಮಂತ್ರಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಕೃಷಿ ಚೆನ್ನಾಗಿದ್ದರೆ ಮಾತ್ರ ನಾಡು ಸುಭಿಕ್ಷವಾಗಿರುತ್ತದೆ ಹೆಣ್ಣುಮಕ್ಕಳು ಶಿಕ್ಷಿತರಾದರೆ ರಾಷ್ಟçವು ಪ್ರಗತಿ ಪಥದಲ್ಲಿ ಸಾಗುತ್ತದೆ ಎಂದು ಅಭಿಪ್ರಾಯಪಟ್ಟರು ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಇದೇ ಉದ್ದೇಶದಿಂದ ಯೋಜನೆಯಲ್ಲಿ ವಿದ್ಯಾರ್ಥಿನಿಯರಿಗೆ ತುಸು ಹೆಚ್ಚಿನ ಮೊತ್ತವನ್ನು ನೀಡಲಾಗುತ್ತದೆ ಎಂದರು.
ಉಜಿರೆ ಎಸ್ ಡಿ ಎಂ ಪಾಲಿಟೆಕ್ನಿಕ್ ಕಾಲೇಜಿನ ವಿದ್ಯಾರ್ಥಿನಿ ನಿಶ್ಮಿತಾ ಅಡಕೆಗೆ ಸಂಬಂಧಿಸಿದ ಸಂಶೋಧನೆಗೆ ವಿನಿಯೋಗಿಸಿರುವುದಾಗಿ ತಿಳಿಸಿದರು.
ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರಾದ ಸುನಿಲ್ ಕುಮಾರ್ ಮಾತನಾಡಿದರು.ಕಂದಾಯ ಸಚಿವರಾದ ಆರ್. ಅಶೋಕ್, ಜಲಸಂಪನ್ಮೂಲ ಸಚಿವರಾದ ಗೋವಿಂದ ಕಾರಜೋಳ, ಸಂಸದರಾದ ನಳಿನ್ ಕುಮಾರ್ ಕಟೀಲ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ಉಮನಾಥ್ ಎ ಕೋಟ್ಯಾನ್, ರಾಜೇಶ್ ನಾಯ್ಕ್ ಯು, ಡಿ. ವೇದವ್ಯಾಸ ಕಾಮತ್, ವಿಧಾನ ಪರಿಷತ್ ಶಾಸಕರಾದ ಮಂಜುನಾಥ್ ಭಂಢಾರಿ, ಮಂಗಳೂರು ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ್ ಕತ್ತಲ್ಸಾರ್, ಕರ್ನಾಟಕ ಮೀನುಗಾರಿಕೆ ಅಭಿವೃದ್ದಿ ನಿಗಮ ನಿಯಮಿತದ ಅಧ್ಯಕ್ಷ ನಿತಿನ್ ಕುಮಾರ್, ಅಲೆಮಾರಿ ಅರೆ ಅಲೆಮಾರಿ ಅಭಿವೃದ್ಧಿ ನಿಮಗದ ಅಧ್ಯಕ್ಷ ಕೆ. ರವೀಂದ್ರ ಶೆಟ್ಟಿ, ಮೂಡಾ ಅಧ್ಯಕ್ಷ ರವಿಶಂಕರ್ ಮಿಜಾರು, ಮೂಡಬಿದರೆ ಪುರಸಭೆ ಅಧ್ಯಕ್ಷ ಪ್ರಸಾದ್ ಕುಮಾರ್, ಪುತ್ತಿಗೆ ಗ್ರಾಮ ಪಂಚಾಯತ್ ಅಧ್ಯಕ್ಷ ಪ್ರವೀಣ್ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ. ಎಂ. ಮೋಹನ್ ಆಳ್ವ ಹಾಗೂ ಇತರೆ ಗಣ್ಯರು ವೇದಿಕೆಯಲ್ಲಿದ್ದರು.ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಸ್ವಾಗತಿಸಿದರು.ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಸಾವಿರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.
ಮುಖ್ಯಮಂತ್ರಿ ರೈತ ವಿದ್ಯಾನಿಧಿ ಯೋಜನೆಯಡಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 2021-22ನೇ ಸಾಲಿನಿಂದ ಇಲ್ಲಿಯವರೆಗೆ 28,966 ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದು, 21,823 ವಿದ್ಯಾರ್ಥಿಗಳಿಗೆ ಒಟ್ಟು 7.87 ಕೋಟಿ ರೂ.ಗಳ ಮೊತ್ತವನ್ನು ನೀಡಲಾಗಿದೆ. ಈ ಮೊತ್ತವು ನೇರವಾಗಿ ಅವರ ಬ್ಯಾಂಕ್ ಖಾತೆಗೆ ಪಾವತಿಯಾಗಿದೆ. 7,143 ವಿದ್ಯಾರ್ಥಿಗಳಿಗೆ 3.14 ಕೋಟಿ ರೂ.ಗಳ ಮೊತ್ತವು ಶೀಘ್ರದಲ್ಲಿ ಅವರ ಖಾತೆಗೆ ಪಾವತಿಯಾಗಲಿದೆ.