ಮಂಗಳೂರು, ಜೂ 01 (DaijiworldNews/SM): ಶಿಕ್ಷಣ ಸಚಿವ ನಾಗೇಶ್ ರ ಮನೆಗೆ ನುಗ್ಗಿ ಎನ್.ಎಸ್.ಯು.ಐ ಮತ್ತು ಕಾಂಗ್ರೆಸ್ ಗೂಂಡಾಗಿರಿ ಮಾಡಿದೆ. ಕಾಂಗ್ರೆಸ್ ವೈಚಾರಿಕ ಹೋರಾಟದಲ್ಲಿ ಸೋತಿದೆ, ತನ್ನ ಮೂಲ ಸಂಸ್ಕೃತಿ ಗೂಂಡಾಗಿರಿ ಮಾಡ್ತಿದೆ ಎಂದು ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ಅಧಿಕಾರ ಕಳೆದುಕೊಂಡ ಮೇಲೆ ಕಾಂಗ್ರೆಸ್ ಹತಾಶ ಭಾವನೆ ಹೊಂದಿದೆ. ಗಲಭೆ ಸೃಷ್ಟಿ, ಬೆಂಕಿ ಹಚ್ಚುವ ಮತ್ತು ಕಲ್ಲು ತೂರುವ ಪ್ರಕ್ರಿಯೆಗೆ ಕಾಂಗ್ರೆಸ್ ತೊಡಗಿದೆ. ಶಾಸಕ ಅಖಂಡ ಶ್ರೀನಿವಾಸ ಮನೆಗೆ ಅವರದ್ದೇ ಸಂಪತ್ ರಾಜ್ ಬೆಂಕಿ ಹಾಕಿದ್ದ. ಇದೆಲ್ಲವನ್ನೂ ನೋಡಿದಾಗ ಕಾಂಗ್ರೆಸ್ ನ ಗೂಂಡಾ ಸಂಸ್ಕೃತಿ ಮತ್ತೆ ತಲೆ ಎತ್ತಿದೆ ಎಂದು ಅನಿಸ್ತಿದೆ.
ಪ್ರಜಾಪ್ರಭುತ್ವದಲ್ಲಿ ವಿರೋಧಪಕ್ಷಗಳು ಹೋರಾಟ, ಆಂದೋಲನ ಮಾಡಬಹುದು. ಸಮಂಜಸ ಅಲ್ಲದ ವಿಚಾರದ ವಿರುದ್ದ ಜನಾಂದೋಲನ ಮಾಡುವ ಹಕ್ಕಿದೆ. ಅದು ಬಿಟ್ಟು ವೈಯಕ್ತಿಕ ದ್ವೇಷದ ರಾಜಕಾರಣ ಕಾಂಗ್ರೆಸ್ ಮಾಡಿದೆ. ಒಬ್ಬ ಸಚಿವರ ಮನೆಗೆ ನುಗ್ಗಿ ಬೆಂಕಿ ಹಾಕುವ ಪ್ರಕ್ರಿಯೆ ಆರಂಭಿಸಿದ್ದಾರೆ. ತಕ್ಷಣ ಪೊಲೀಸರು ಅದನ್ನ ನಿಯಂತ್ರಿಸಿದ ಪರಿಣಾಮ ಅನಾಹುತ ತಪ್ಪಿದೆ. ಆ 18 ಕಿಡಿಗೇಡಿಗಳನ್ನ ಬಂಧಿಸಿದ್ದಕ್ಕೆ ಸಿಎಂ ಮತ್ತು ಗೃಹಸಚಿವರಿಗೆ ಅಭಿನಂದಿಸ್ತೇನೆ ಎಂದರು.
ಇನ್ನು ಇದೊಂದು ಪಕ್ಕಾ ವ್ಯವಸ್ಥಿತ ಷಡ್ಯಂತ್ರ ಅನಿಸುತ್ತಿದೆ. ಅದರಲ್ಲಿ ಚಿಕ್ಕಮಗಳೂರು, ದಾವಣಗೆರೆ ಸೇರಿ ಬೇರೆ ಭಾಗದವರು ಸೇರಿ ಮಾಡಿದ್ದಾರೆ. ಕಾಂಗ್ರೆಸ್ ಅಧಿಕಾರ ಕಳೆದುಕೊಂಡು ಸೋಲಿನ ಭೀತಿಯಲ್ಲಿದೆ. ಮತ್ತೆ ಕಾಂಗ್ರೆಸ್ ಮತ್ತು ಎನ್.ಎಸ್.ಯು.ಐ ಗೂಂಡಾಗಿರಿ ಮಾಡಿದೆ. ಮುಂದಿನ ದಿನಗಳಲ್ಲಿ ಇದನ್ನ ಮುಂದುವರೆಸಿದ್ರೆ ಉತ್ತರ ಕೊಡಲು ನಮ್ಮ ಕಾರ್ಯಕರ್ತರು ಸಮರ್ಥರಿದ್ದಾರೆ ಎಂದು ಎಚ್ಚರಿಕೆ ನೀಡಿದ್ದಾರೆ.