ಮಂಗಳೂರು, ಜೂ 01 (DaijiworldNews/SM): ಎಸ್ ಡಿಪಿಐ ಕಾರ್ಯಕರ್ತರಿಂದ ಪೊಲೀಸ್ ನಿಂದನೆ ವಿಚಾರಕ್ಕೆ ಸಂಬಂಧಿಸಿ ಕಾರ್ಯಕರ್ತರ ಬಂಧನದ ಬೆನ್ನಲ್ಲೇ ಎಸ್ ಡಿಪಿಐ ಸುದ್ದಿಗೋಷ್ಟಿ ನಡೆಸಿದ್ದು, ಪ್ರಕರಣದಲ್ಲಿ ಅಮಾಯಕರನ್ನು ಬಂಧಿಸಲಾಗಿದೆ ಎಂದು ಸುದ್ದಿಗೋಷ್ಟಿಯಲ್ಲಿ ಎಸ್ ಡಿಪಿಐ ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದಾತ್ ಬಜತ್ತೂರು ಆರೋಪಿಸಿದ್ದಾರೆ.
ಪೊಲೀಸ್ ನಿಂದನೆ ಘೋಷಣೆ ಖಂಡನೀಯ. ನಾಗರಿಕ ಸಮಾಜ ಒಪ್ಪತಕ್ಕಂತಹ ವಿಚಾರವಲ್ಲ. ಪೊಲೀಸರ ಬಗ್ಗೆ ಎಸ್ ಡಿಪಿಐ ಗೌರವ ಹೊಂದಿದೆ. ವೀಡಿಯೋ ವೈರಲ್ ಬೆನ್ನಲ್ಲೇ ಪೊಲೀಸ್ ಅಧಿಕಾರಿಗಳನ್ನು ಎಸ್ ಡಿಪಿಐ ನಾಯಕರು ಸಂಪರ್ಕಿಸಿ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದರು. ಆದರೆ ಘಟನೆಯಲ್ಲಿ ಹಲವು ಅಮಾಯಕರ ಬಂಧಿಸಲಾಗುತ್ತಿದೆ. ಕೆಲವೇ ಜನರು ಮಾಡಿದ ತಪ್ಪಿಗೆ ಹಲವರನ್ನು ಬಂಧಿಸಲಾಗಿದೆ. ಸಮಾವೇಶದಲ್ಲಿ ಭಾಗವಹಿಸದೇ ಇರೋರ ಬಂಧನವಾಗಿದೆ.
ಇದರಲ್ಲಿ ಪಕ್ಷದ ಕಾರ್ಯಕರ್ತರು, ಬೆಂಬಲಿಗರೂ ಸೇರಿದ್ದಾರೆ. ಬೆಂಗಳೂರು, ಮೈಸೂರಿಗೆ ತೆರಳಿ ಬಂಧಿಸಲಾಗಿದೆ. ಬೆಂಗಳೂರಿನಲ್ಲಿ ರೂಂ ಮಾಡಿರುವವರನ್ನು ಬಂಧಿಸುವ ವೇಳೆ ಜೊತೆಗಿದ್ದವರನ್ನು ಬಂಧಿಸಲಾಗಿದೆ. ಆಶ್ರಯ ನೀಡಿದ ಆರೋಪದಲ್ಲಿ ರೂಂ ಮೇಟ್ ಗಳ ಬಂಧನ ಮಾದಲಾಗಿದೆ. ಸಮಾವೇಶದ ಮುನ್ನವೇ ಘೋಷಣೆ ಕೂಗಲಾಗಿತ್ತು. ವೀಡಿಯೋ ರಾತ್ರಿ ವೇಳೆ ವೈರಲ್ ಆಗಿತ್ತು. ಆದರೆ ಪೊಲೀಸರು ತಮ್ಮ ಮೇಲೂ ವಾಹನ ಹಾಯಿಸಲು ಯತ್ನಿಸಿದ್ದಾಗಿ ಆರೋಪಿಸಿದ್ದಾರೆ. ಎಸ್ ಡಿಪಿಐ ಬೆಳವಣಿಗೆ ಸಹಿಸದೇ ಸಂಘ ಪರಿವಾರದ ಅಣತಿಯಂತೆ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಜಗದೀಶ್ ಕಾರಂತ ಈ ಹಿಂದೆ ಹಲವು ಬಾರಿ ಪೊಲೀಸರಿಗೆ, ಡಿಸಿ ಗೆ ಬಹಿರಂಗ ಧಮ್ಕಿ ಹಾಕಿದ್ದರು. ಅಂತಹ ಸಮಯದಲ್ಲಿ ಕಾರಂತ ಬಂಧಿಸಲು ಇಲ್ಲಿನ ಪೊಲೀಸರಿಗೆ ಸಾಧ್ಯವಾಗಿಲ್ಲ. ಎಸ್ ಡಿಪಿಐ ಹತ್ತಿಕ್ಕಲು ಪೊಲೀಸ್ ಇಲಾಖೆ ಮುಂದಾಗಿದೆ. ಇದು ಪೊಲೀಸ್ ಆಯುಕ್ತರಿಗೆ ಶೋಭೆ ತರುವುದಿಲ್ಲ ಎಂದು ಅವರು ಆರೋಪಿಸಿದ್ದಾರೆ.