Karavali
ಕಾರ್ಕಳ ಕ್ಷೇತ್ರದ ಅಭಿವೃದ್ಧಿಗೆ ರೂ. 40 ಕೋಟಿ ಅನುದಾನ ಬಿಡುಗಡೆ - ಸಿಎಂ ಬೊಮ್ಮಾಯಿ ಘೋಷಣೆ
- Wed, Jun 01 2022 06:14:20 PM
-
ಕಾರ್ಕಳ, ಜೂ 01 (DaijiworldNews/MS): ಕಾರ್ಕಳ ಕ್ಷೇತ್ರದ ಇನ್ನಷ್ಟು ಸಮಗ್ರ ಅಭಿವೃದ್ಧಿಗಾಗಿ ರೂ. 40 ಕೋಟಿ ಅನುದಾನ ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಕಾರ್ಕಳ ತಾಲೂಕು ಅಜೆಕಾರು ಎಣ್ಣೆಹೊಳೆಯಲ್ಲಿ ರೂ.108 ಕೋಟಿ ವೆಚ್ಚದಲ್ಲಿ ನಿರ್ಮಾಣವಾದ ಏತ ನೀರಾವರಿ ಯೋಜನೆ ಲೋಕಾರ್ಪಣೆಗೈದು ಅವರು ಮಾತನಾಡಿದರು.
ಕರಾವಳಿ ಭಾಗವು ಇನ್ನು ಅತ್ಯಂತ ಆಧುನಿಕ ಜಿಲ್ಲೆಯನ್ನಾಗಿ ಪರಿವರ್ತನೆಗಾಗಿ ದಕ್ಷ, ಪ್ರಾಮಾಣಿಕ, ಕಾಳಜಿಯುಳ್ಳ ಮೂವರು ಸಚಿವರನ್ನು ನಿಯೋಜಿಸಲಾಗಿದೆ. ಕಾರವಾರ ಮತ್ತು ಮಂಗಳೂರು ಬಂದರು ಗಳಲ್ಲಿ ಹೆಚ್ಚಿನ ವ್ಯವಹಾರ ಚಟುವಟಿಕೆಗೆ ಪೂರಕವಾಗಿ ಸಮಗ್ರ ಅಭಿವೃದ್ಧಿ ಮತ್ತು ಬೀಚ್ ಟೂರಿಸಂ ಅಭಿವೃದ್ಧಿಯ ಜೊತೆಗೆ ಕಾರ್ಕಳದಲ್ಲಿ ಜೈನ ಬಸದಿ ಹಾಗೂ ಪ್ರಾಚೀನ ಮಂದಿರಗಳಿರುವುದರಿಂದ ಪ್ರವಾಸೋದ್ಯಮಕ್ಕೆ ಒತ್ತು ನೀಡಲಾಗುವುದು ಎಂದರು.
ಜನಸ್ಪಂದನೆಯ ರಾಜ್ಯ ಸರಕಾರವಾಗಿದೆ. ದಕ್ಷ, ಪ್ರಮಾಣಿಕತೆ,ಸಾಮಾಜಿಕ ಕಾಳಜಿಯುಳ್ಳ ಸಚಿವ ತಂಡವು ಸಕ್ರಿಯಾವಾಗಿ ಕಾರ್ಯನಿರ್ವಹಿಸುತ್ತಾ ಬಂದಿರುವುದರಿಂದ ಕರ್ನಾಟಕವು ಸಮಗ್ರ ಅಭಿವೃದ್ಧಿ, ಸುರಕ್ಷ, ಸಶಕ್ತವಾಗಿ ಮೂಡಿಬಂದಿದೆ ಎಂದರು.
ಎಣ್ಣೆಹೊಳೆ ಏತ ನೀರಾವರಿ ಯೋಜನೆಯ ಕಾಮಗಾರಿ ಒಂದೇ ವರ್ಷದಲ್ಲಿ ಪೂರ್ಣ ಗೊಳಿಸಿ ಲೋಕಾರ್ಪಣೆಗೈಯಲಾಗಿದೆ. ಕಡಿಮೆ ಅವಧಿಯಲ್ಲಿ ಅತೀ ದೊಡ್ಡ ಯೋಜನೆಯೊಂದನ್ನು ಪರಿಪೂರ್ಣಗೊಳಿಸಿ ಯೋಜನೆಯನ್ನು ಸಕಾರಗೊಳಿಸಿದ ಕೀರ್ತಿಯು ನಮ್ಮ ಸರಕಾರದಾಗಿದೆ ಎಂದು ಇದೇ ಸಂದರ್ಭದಲ್ಲಿ ಅಭಿಮಾನ ವ್ಯಕ್ತಪಡಿಸಿದರು.
ಕಂದಾಯ ಇಲಾಖೆಯು ರಾಜ್ಯದಲ್ಲಿ ಕ್ರಾಂತಿಕಾರಿ ಬದಲಾವಣೆಯನ್ನು ತಂದಿದೆ. ಹಲವು ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿದ್ದ ಡೀಮ್ಡ್ ಫಾರೆಸ್ಟ್ ಸಮಸ್ಸೆಯನ್ನು ತಮ್ಮ ಸರಕಾರವು ಅಧಿಕಾರಕ್ಕೆ ಬಂದ ಕೆಲವೇ ತಿಂಗಳ ಅವಧಿಯೊಳಗಾಗಿ ಬಗೆಹರಿಸಿದೆ. ಪರಿಣಾಮವಾಗಿ 6.33 ಲಕ್ಷ ಹೆಕ್ಟೇರ್ ಪ್ರದೇಶವು ಡೀಮ್ಡ್ ಪಾರೆಸ್ಟ್ ಮುಕ್ತಗಳಿಸಿ ಆರ್ಹ ಫಲಾನುಭವಿಗಳಿಗೆ ನೀಡುವ ಮೂಲಕ ನ್ಯಾಯ ಒದಗಿಸಿದೆ ಎಂದರು. ಮನೆ ಮನೆಗೆ ಭೂ ದಾಖಲೆಗಳು ಒದಗಿಸುವಲ್ಲಿ ಕಂದಾಯ ಇಲಾಖೆ ಮುಂದಾಗಿರುವುದಕ್ಕೆ ಇದೇ ಸಂದಭ್ದಲ್ಲಿಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಪ್ರಶಂಸೆ ವ್ಯಕ್ತಪಡಿಸಿದರು.
ಗರೀಬ್ ಹಠಾವೋ ಹೆಸರಿನಲ್ಲಿ ನೀಡದ ಸಾಮಾಜಿಕ ನ್ಯಾಯ!
ದೇಶದಲ್ಲಿ ಗರೀಬ್ ಹಠಾವೋ ಹೆಸರಿನಲ್ಲಿ ಸಾಮಾಜಿಕ ನ್ಯಾಯ ನೀಡದೇ ಕೇವಲ ರಾಜಕೀಯ ಮಾಡ ನಡೆಸಲಾಗಿದೆ. ಇದರಿಂದ ದೀನ-ದಲಿತರು-ಬಡವರ ಪಾಲಿಗೆ ನ್ಯಾಯ ದೊರಕಿಲ್ಲ. ಆದರೆ ಕೇಂದ್ರ ಮತ್ತು ರಾಜ್ಯದಲ್ಲಿ ಅಧಿಕಾರದಲಿರುವ ಬಿಜೆಪಿಯು ಸರ್ವ ಜನರ ಆಶೋತ್ತರಗಳನ್ನು ಅನುಷ್ಠಾನಗೊಳಿಸಿದೆ. ಅಭಿವೃದ್ಧಿಯ ಮೂಲ ಮಂತ್ರದೊಂದಿಗೆ ಜನರೇ ಅಧಿಕಾರಕ್ಕೆ ತಂದಿರುವ ಸರಕಾರದ ಕಾರ್ಯಪ್ರಗತಿಯನ್ನು ಮುಂದಿಟ್ಟು ಜನಾದೇಶಕ್ಕಾಗಿ ಮತ್ತೇ ಜನರತ್ತ ಹೋಗಲಿದ್ದು, ಅವರ ಆಶೀರ್ವಾದೊಂದಿಗೆ ಮುಂದಿನ ಬಾರಿಯೂ ಬಿಜೆಪಿ ಸರಕಾರ ಮತ್ತೇ ರಾಜ್ಯ ಮತ್ತು ಕೇಂದ್ರದಲ್ಲಿ ಅಧಿಕಾರ ಚುಕ್ಕಾಣಿ ಹಿಡಿಯುವುದು ನಿಚ್ಚತ ಎಂದು ವಿಶ್ವಾಸ ವ್ಯಕ್ತಪಡಿಸಿದರು.ಸಮಾಜ ಕಲ್ಯಾಣ ಇಲಾಖೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಎಣ್ಣೆಹೊಳೆ ಏತ ನೀರಾವರಿ ಯೋಜನೆಯಿಂದ ಲಕ್ಷಾಂತರ ಕೃಷಿಕರಿಗೆ ಲಾಭವಾಗಿ ಗಂಗಾ ಮಾತೆಯೇ ಕಾರ್ಕಳಕ್ಕೆ ಹರಿದು ಬಂದಂತೆ ಆಗಿದೆ. ಅದ್ಭುತ ಯೋಜನೆಯ ರೂವಾರಿ ಸುನಿಲ್ರನ್ನು ಅಭಿನಂದಿಸುವೆ ಎಂದರು. ಸಿ.ಎಂ ಬೊಮ್ಮಾಯಿಯವರು ಸಮಾಜದ ಕಟ್ಟ ಕಡೆಯ ವ್ಯಕ್ತಿಯ ಏಳಿಗೆಗೆ ಶ್ರಮಿಸುತ್ತಿದ್ದು, ಸಮಾಜ ಕಲ್ಯಾಣ ಇಲಾಖೆಯಲ್ಲಿ 28ಲಕ್ಷ ಕುಟುಂಬಗಳಿವೆ ಇವುಗಳ ಪೈಕಿ 24.500 ಲಕ್ಷ ಕುಟುಂಬಗಳಿಗೆ75ಯೂನಿಟ್ ಕರೆಂಟ್ ಉಚಿತ ವಿದ್ಯುತ್ ನೀಡಿದ್ದಾರೆ ಎಂದರು.
ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಮಾತನಾಡಿ, ರಾಜ್ಯ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಯಡಿಯೂರಪ್ಪ ಸಿ.ಎಂ ಆಗಿದ್ದಾಗ ಅಥವಾ ಬೊಮ್ಮಾಯಿ ಸರಕಾರದ ಅವಧಿಯಲ್ಲಿ ನೀರಾವರಿಗೆ ಹೆಚ್ಚು ಅನುದಾನ ಕೊಡುವ ಕೆಲಸವಾಗಿದೆ. ನಾಡಿನ ಬೃಹತ್ ನೀರಾವರಿ ಯೋಜನೆಗಳಾದ ಕೃಷ್ಣ ಮೇಲ್ದಂಡೆ ಯೋಜನೆ, ಈ ವರ್ಷ ೫ ಸಾವಿರ ಕೋ.ರೂ ಅನುದಾನ ನೀಡ ಮೇಕೆದಾಟುವಿಗೆ 1ಸಾವಿರ ಕೋಟಿ , ನವಿಲೆ ಆಣೆಕಟ್ಟಿಗೆ1 ಸಾವಿರ ಕೋಟಿ , ಎತ್ತನಹೊಳೆಗೆ 3 ಸಾವಿರ ಕೋಟಿ ಎಲ್ಲ ಯೋಜನೆಗಳಿಗೆ ಹೆಚ್ಚು ಅನುದಾನ ನೀಡಿ ಎಲ್ಲ ಯೋಜನೆಗಳನ್ನು ಪೂರ್ಣಗೊಳಿಸುವ ಗುರಿ ಹೊಂದಲಾಗಿದೆ ಎಂದರು. ಹಳ್ಳಿಗಳ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಪ್ರಯತ್ನ ನಡೆಸಲಾಗಿದೆ. ಬೊಮ್ಮಾಯಿರವರು ನೀರಾವರಿ ತಜ್ಞರೂ ಆಗಿರುವುದರಿಂದ ನೀರಾವರಿ ಯೋಜೆನಗಳಿಗೆ ಹೆಚ್ಚು ಆದ್ಯತೆ ನೀಡಿದ್ದಾರೆ.
ಎಣ್ಣೆಹೊಳೆ ಯೋಜನೆ ಸಚಿವ ಸುನಿ ರ ಕನಸಿನ ಯೋಜನೆ, ಸ್ವಾತಂತ್ರ್ಯ ನಂತರದಲ್ಲಿ ಅನೇಕ ಮಂದಿ ಶಾಸಕರು, ಸಚಿವರು ನಾಡಿನಲ್ಲಿ ಆಗಿ ಹೋಗಿದ್ದಾರೆ. ಇಂತಹ ಯೋಜನೆ ಕೈಗೆತ್ತಿಕೊಳ್ಳಲು ಯಾರು ಯೋಚನೆ ಮಾಡಿರಲಿಲ್ಲ ಅದನ್ನು ಇಲ್ಲಿನ ಸುನೀಲ್ಕುಮಾರ್ ಮಾಡಿದ್ದಾರೆ. ಜನಪರ ಜನನಾಯಕನಾಗಿ ಜನರ ಋಣ ತೀರಿಸುವ ಕೆಲಸ ಮಾಡಿದ್ದೀರಿ ಎಂದರು.
ಎಣ್ಣೆಹೊಳೆ ಏತ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಿ ಅನುಷ್ಠಾನಗೊಳಿಸುತ್ತಿದ್ದೇವೆ. ಯೋಜನೆಯಲ್ಲಿ ೪.೫೦೦ ಎಕರೆ ಭೂಮಿಗೆ ನೀರಾವರಿ, 9 ಹಳ್ಳಿಗಳಿಗೆ ಅನುಕೂಲವಾಗಲಿದೆ. ಎರಡು ಕೆರೆ ತುಂಬಲು ಸಾಧ್ಯವಾಗುತ್ತದೆ. ೪೫ ಚೆಕ್ ಡ್ಯಾಂ ಕಟ್ಟಿ ನೀರು ನಿಲ್ಲಿಸುವ ಸುಂದರ ಯೋಜನೆ ಇದಾಗಿದೆ. ರಾಜ್ಯದಲ್ಲಿ ಸ್ವಾತಂತ್ರ್ಯ ಪೂರ್ವ ಹಾಗೂ ನಂತರದಲ್ಲಿ ಸುಮಾರು ೨೮ ಲಕ್ಷ ಎಕರೆಯಷ್ಟು ನೀರಾವರಿ ಸೌಲಭ್ಯ ಒದಗಿಸಿದ್ದೇವೆ. ಅದರೆ ನೋವಿನ ಸಂಗತಿ ಎಂದರೆ ೧೫ ಶೇ ಭೂಮಿ ಬರಡಾಗುತ್ತಿದೆ. ರೈತರು ಎಚ್ಚೆತ್ತು ನೀರನ್ನು ಮಿತವಾಗಿ,ವೈಜ್ಞಾನಿಕವಾಗಿ ಬಳಸಬೇಕು. ನೀರು ಅಗತ್ಯದಷ್ಟೆ ಉಪಯೋಗಿಸಿದರೆ ಮಾತ್ರ ಭೂಮಿಯನ್ನು ಸುರಕ್ಷಿತವಾಗಿಡಲು ಸಾಧ್ಯ ಎಂದರು.ಅಧ್ಯಕ್ಷತೆ ವಹಿಸಿದ ಇಂಧನ, ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ ಸುನಿಲ್ಕುಮಾರ್ ಮಾತನಾಡಿ, ರಾಜ್ಯದ ಮೊಣಕಾಲೂರು, ಕೊಪ್ಪಳ, ಚನ್ನರಾಯಪಟ್ಟಣದಲ್ಲಿ ಸ್ಥಳಿಯವಾಗಿ ಕ್ಲಸ್ಟರ್ಗಳಾಗಿವೆ. ಅಂತೆಯೇ ಶಿಲ್ಪಕಲೆ, ಮರದ ಕೆತ್ತನಗೆ ಹೆಸರುವಾಸಿಯಾಗಿರುವ ಕಾರ್ಕಳದಲ್ಲಿ ಸಹಸ್ರಾರು ಮಂದಿ ಈ ಕ್ಷೇತ್ರದಲ್ಲಿ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದಾರೆ. ಕಾರ್ಕಳಕ್ಕೆ ಕ್ಲಸ್ಟರ್ ಅನ್ನು ಈ ವರ್ಷ ಕಾರ್ಕಳಕ್ಕೆ ನೀಡಿ ಉದ್ದಿಮೆ ಕ್ಷೇತ್ರದ ಅಭಿವೃದ್ಧಿಗೆ ಸಹಕರಿಸುವಂತೆ ಹಾಗೂ ಎಣ್ಣೆಹೊಳೆ ಪೈಪ್ ಲೈನ್, ತಡೆಗೋಡೆ ನಿರ್ಮಾಣಕ್ಕೆ ಹೆಚ್ಚುವರಿ ಅನುದಾನವನ್ನು ಸಿಎಂ ಬಳಿ ಮನವಿ ಮಾಡಿಕೊಂಡರು.
ಕರಾವಳಿಯ ಎರಡು ಜಿಲ್ಲೆಯನ್ನು ಗಮನದಲ್ಲಿಟ್ಟುಕೊಂಡು ಪಶ್ಚಿಮ ವಾಹಿನಿಮೂಲಕ ಚೆಕ್ ಡ್ಯಾಮ್ಗಳ ನಿರ್ಮಾಣ ಮಾಡಿ ನೀರಿಂಗಿಸುವ ಕಾರ್ಯಕ್ಕೆ ಎರಡು ಬಜೆಟ್ನಲ್ಲಿ ತಲಾ ೫೦೦ ಕೋ.ರೂ ಮೀಸಲಿಟ್ಟಿದ್ದರು. ಎಲ್ಲ ತಾಲೂಕುಗಳಲ್ಲಿ ನೂರಾರು ಕಿಂಟಿಣೆಕಟ್ಟುಗಳು ನಿರ್ಮಾಣವಾಗಿದೆ ಎಂದರು.
ಸವೋಚ್ಛ ದತ್ತ ಕೈ ತೋರಿಸುತ್ತಿದ್ದರು?!
ಅವಿಭಜಿತ ದ.ಕ ಜಿಲ್ಲೆಯಲ್ಲಿ ಡೀಮ್ಡ್ ಫಾರೆಸ್ಟ್ ಸಮಸ್ಯೆಯಿಂದ ಬಡ ಕುಟುಂಬಗಳಿಗೆ ಹಕ್ಕುಪತ್ರ ನೀಡಲು ಅಭಿವೃದ್ಧಿ ಕಾರ್ಯಗಳಿಗೆ ಹಿನ್ನಡೆಯಾಗಿತ್ತು. ಸಾಗುವಾಳಿ ಚೀಟಿ ನೀಡಲು ಸಾಧ್ಯವಾಗುತ್ತಿರಲಿಲ್ಲ. ಅಧಿಕಾರಿಗಳು ಮಾತ್ರ ಸವೋಚ್ಛ ನ್ಯಾಯಾಲಯದತ್ತ ಕೈ ತೋರಿಸುತ್ತಿದ್ದರು. ಬೊಮ್ಮಾಯಿ ಉಸ್ತುವಾರಿ ಸಚವರಾಗಿದ್ದ ವೇಳೆ ಅವರ ಗಮನಕ್ಕೆ ಈ ವಿಚಾರವನ್ನು ತಂದಿದ್ದೆವು. ಸಿ.ಎಂ ಆದ ತತ್ಕ್ಷಣ ಕಡತಗಳನ್ನು ತರಿಸಿ ಕಾನೂನಿನ ಸಲಹೆ ಪಡೆದು 30 ವರ್ಷಗಳಲ್ಲಿ ಆಗದ ಸಮಸ್ಯೆಯನ್ನು ನಿವಾರಿಸಿಕೊಟ್ಟಿದ್ದಾರೆ. 6.5 ಹೆಕ್ಟೇರ್ ಪ್ರದೇಶ ವಿರಹಿತಗೊಳಿಸಿದ ಕೀರ್ತಿ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರಕಾರಕ್ಕೆ ಸಲ್ಲುತ್ತದೆ ಎಂದರು. 94 ಸಿ ಅಕ್ರಮ ಸಕ್ರಮದಡಿ ಹಕ್ಕು ಪತ್ರ ನೀಡಲು ಸಾಧ್ಯವಾಗಲಿದೆ ಎಂದರು. 180 ಯೋಜನೆಗಳಿಗೆ ಸರಕಾರಿ ಆದೇಶ ನೀಡಿ ತತ್ಕ್ಷಣದಲ್ಲಿ ಜಾರಿಗೆ ತಂದಿದ್ದಾರೆ. ಕಾರ್ಕಳದ ಅಭಿವೃದ್ಧಿ ಚುವಟಿಕೆ ಅದು ನಿರಂತರವಾದದ್ದು, ಹೊಸ ಯೋಜನೆ ಯೋಚನೆಗ:ಳ ಮೂಲಕ ಮಾಡುವವರಿದ್ದೇವೆ ಎಂದು ಸುನಿಲ್ ಹೇಳಿದರು.ಉಡುಪಿ ಉಸ್ತುವಾರಿ ಸಚಿವ ಎಸ್ ಅಂಗಾರ,ಕಂದಾಯ ಸಚಿವ ಆರ್ ಅಶೋಕ,ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್ ಹೆಗ್ಡೆ, ಕರಾವಳಿ ಅಭಿವ್ರದ್ದಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಶಾಸಕರಾದ ರಘುಪತಿ ಭಟ್, ಲಾಲಾಜಿ ಮೆಂಡನ್, ಬಿ.ಎಂ ಸುಕುಮಾರ ಶೆಟ್ಟಿ, ಗೇರು ಅಭಿವ್ರದ್ದಿ ನಿಗಮದ ಅಧ್ಯಕ್ಷ ಮಣಿರಾಜ್ ಶೆಟ್ಟಿ, ಮರ್ಣೆ ಗ್ರಾ.ಪಂ ಅಧ್ಯಕ್ಷೆ ಜ್ಯೋತಿ ಪೂಜಾರಿ, ಜಲಸಂಪನ್ಮೂಲ ಇಲಾಖೆ ಅಪರ ಕಾರ್ಯದರ್ಶಿ ರಾಕೇಶ್ ಸಿಂಗ್, ಕಾರ್ಮಿಕ ಇಲಾಖೆ ಸರಕಾರದ ಕಾರ್ಯದರ್ಶಿ ಮನೋಜ್ ಜೈನ್, ಉಡುಪಿ ಜಿಲ್ಲಾಧಿಕಾರಿ ಕೂರ್ಮರಾವ್ ಎಂ, ಜಿಲ್ಲಾ ಪಮಚಾಯತ್ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್ , ಪೊಲೀಸ್ ಅಧೀಕ್ಷಕ ಎನ್ ವಿಷ್ಣುವರ್ಧನ್, ಜಲಸಂಪನ್ಮೂಲ ಇಲಾಖೆ ಕಾರ್ಯದರ್ಶಿ ಕೃಷ್ಣಮೂರ್ತಿ ಬಿ ಕುಲಕರ್ಣಿ, ತುಂಗಾ ಮೇಲ್ದಂಡ ಯೋಜನೆ ಶಿವಮೊಗ್ಗ ವಲಯದ ಮುಖ್ಯ ಇಂಜಿನೀಯರ್ ಶಿವಾನಂದ ಎಸ್ ಬಣಕಾರ್, ಕ.ನೀ.ನಿ.ನಿ ವ್ಯವಸ್ಥಾಪಕ ನಿರ್ದೆಶಕ ಮಲ್ಲಿಕಾರ್ಜುನ ಬಿ. ಗಂಗೆ, ವಿಭಾಗಧಿಕಾರಿ ರಾಜು, ತಾ.ಒಂ ಇಒ ಗುರುದತ್ತ್, ಬಿಜೆಪಿ ಉಡುಪಿ ಜಿಲಲಾಧ್ಯಕ್ಷ ಸುರೇಶ್ ನಾಯಕ್ ಉಪಸ್ಥಿತರಿದ್ದರು
ತಹಶೀಲ್ದಾರ್ ಪ್ರದೀಪ ಕುರ್ಡೆಕರ್ ಸ್ವಾಗತಿಸಿದರು. ಅರತಿ ಪೈ ತಂಡ ನಾಡಗೀತೆ ಹಾಡಿದರು. ಹರೀಶ್ ನಾಯಕ್ ನಿರೂಪಿಸಿದರು.