ಉಡುಪಿ, ಜೂ 01 (DaijiworldNews/DB): ಪ್ರಧಾನಿ ಮೋದಿ ಎರಡು ಆಯಾಮದ ರಾಜಕಾರಣಿ. ಮೋದಿ ಪೀಪಲ್ ಪಾಲಿಟಿಕ್ಸ್ ಮಾಡುತ್ತಾರೆ. ಅವರು ಮುಂದಿನ ಜನಾಂಗ ಕಟ್ಟುವ ಮುತ್ಸದ್ಧಿ ರಾಜಕಾರಣಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಣ್ಣಿಸಿದ್ದಾರೆ.
ಉಡುಪಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಬುಧವಾರ ಮಾತನಾಡಿದ ಅವರು, ಮೋದಿಯವರಿಗೆ 2024ರಲ್ಲಿ ಜನಮನ್ನಣೆ ಸಿಗಲಿದೆ. ನವ ಕರ್ನಾಟಕದಿಂದ ನವಭಾರತದ ನಿರ್ಮಾಣವನ್ನು ಪ್ರಧಾನಿಮೋದಿ ಮಾರ್ಗದರ್ಶನದಲ್ಲಿ ಮಾಡುತ್ತೇವೆ ಎಂದರು.ನಮ್ಮ ನೆಚ್ಚಿನ ನಾಯಕರ ಸರ್ಕಾರಕ್ಕೆ 8 ವರ್ಷ ಪೂರ್ಣ ಆಗಿದೆ. ಎಂಟು ವರ್ಷದ ಸಂಭ್ರಮ ಬಹಳ ಮುಖ್ಯ. ಆಜಾದಿ ಕ ಅಮೃತ ಮಹೋತ್ಸವ ಸಂದರ್ಭ ಆತ್ಮಾವಲೋಕನ, ಸಿಂಹಾವಲೋಕನ ಮಾಡಬೇಕಾಗಿದೆ.ಮುಂದಿನ 25 ವರ್ಷದ ಸಂಕಲ್ಪ ಬಹಳ ಮುಖ್ಯ. ಮೋದಿ ಅಧಿಕಾರಾವಧಿಯ ಅಭಿವೃದ್ಧಿ ಚರ್ಚೆ ಆಗಬೇಕಿದೆ. ದೇಶದ ಭವಿಷ್ಯದ ಸುರಕ್ಷತೆ, ದೇಶದ ಸಮೃದ್ಧಿಗೆ ಮೋದಿ ಅವಶ್ಯಕ. ಸಾಧನೆ ಮಾಡಿದವರು ಮಾತ್ರ ರಿಪೋರ್ಟ್ ಕಾರ್ಡ್ ಕೊಡಲು ಸಾಧ್ಯ ಎಂದ ಅವರು,ದೇಶದಲ್ಲಿ ಮೂರು ವಿಚಾರ ಬಹಳ ಪ್ರಾಮುಖ್ಯವಾಗಿದೆ. ಕೋವಿಡ್ ಸಂದರ್ಭದಲ್ಲಿ ಆತ್ಮನಿರ್ಭರ ಭಾರತ ಘೋಷಣೆಯಾಯಿತು. ಮೇಕ್ ಇನ್ ಇಂಡಿಯಾಕ್ಕೆ ಬಹಳ ಒತ್ತು ಕೊಡಲಾಗುತ್ತಿದೆ ಎಂದು ತಿಳಿಸಿದರು.
ಸಾಧನೆಯ ರಿಪೋರ್ಟ್ ಕಾರ್ಡ್ ಕೊಡುತ್ತೇವೆ
8 ವರ್ಷದಲ್ಲಿ ಆದ ಲಾಭ ಏನು ಎಂಬ ರಿಪೋರ್ಟ್ ಕೊಡುತ್ತೇವೆ. ಇದೇ ಸಮಯದಲ್ಲಿ ನಮ್ಮ ಸ್ವತಂತ್ರದ ಅಮೃತ ಮಹೋತ್ಸವ ನಡೆಸುತ್ತಿದ್ದೇವೆ.ಮೋದಿ ಅಧಿಕಾರ ವಹಿಸಿಕೊಂಡಾಗ ಇದ್ದ ಸ್ಥಿತಿ ಏನು ಎಂಬ ಬಗ್ಗೆ ಚರ್ಚೆ ಆಗಬೇಕು. ಮೋದಿ ಅವರು ಗುಜರಾತ್ ಸಿಎಂ ಆಗಿದ್ದ ಸಮಯದಲ್ಲೂ ರಿಪೋರ್ಟ್ ಕಾರ್ಡ್ ಕೊಡುತ್ತಿದ್ದರು. ಕೋವಿಡ್ ಸಮಯದಲ್ಲಿ ಆತ್ಮ ನಿರ್ಭರ ಭಾರತದ ಕರೆಯನ್ನು ಮೋದಿ ನೀಡಿದರು. ಪ್ರತಿಯೊಂದು ರಂಗದಲ್ಲೂ ಭಾರತ ಸ್ವಾವಲಂಬನೆ ಸಾಧಿಸಬೇಕು ಎನ್ನುವ ದೃಷ್ಟಿಯಿಂದ ಕೆಲಸ ಮಾಡಿದರು. ಆಹಾರ, ಅರೋಗ್ಯ ಮತ್ತು ಉದ್ಯೋಗ ಭದ್ರತೆಗೆ ಅನೇಕ ಗರೀಬ್ ಕಲ್ಯಾಣ್ ಯೋಜನೆಗಳು ಜಾರಿಯಾಗಿವೆ.ಅಭಿವೃದ್ಧಿಯಲ್ಲಿ ಜನರು ಫಲಾನುಭವಿ ಆಗದೇ ಪಾಲುದಾರರಾಗಬೇಕೆಂಬ ದೃಷ್ಟಿಯಿನದ ಸಬ್ಕ ಸಾಥ್ ಸಬ್ಕ ವಿಕಾಸ್ ಸಬ್ಕ ವಿಶ್ವಾಸ ಧ್ಯೇಯ ನಮ್ಮದು ಎಂದು ಸಿಎಂ ಬೊಮ್ಮಾಯಿ ವಿವರಿಸಿದರು.
25 ಲಕ್ಷ ಮನೆಗಳಿಗೆ ಕುಡಿಯುವ ನೀರು
ಹಿಂದಿನ ಪ್ರಧಾನಿಗಳು ಕೆಲವು ವಿಷಯದ ಬಗ್ಗೆ ಮಾತನಾಡಲೂ ಹೆದರುತ್ತಿದ್ದರು.ಪ್ರತೀ ಮನೆಗೆ ಕುಡಿಯುವ ನೀರು ಮುಟ್ಟಿಸಲು ದಿಟ್ಟ ನಿರ್ಧಾರಕರ್ನಾಟಕದಲ್ಲಿ ಕೈಗೊಳ್ಳಲಾಗಿದೆ. ಜಲ ಜೀವನ್ ಯೋಜನೆಯಡಿ ಈ ವರ್ಷ ಮತ್ತೆ 25 ಲಕ್ಷ ಮನೆಗಳಿಗೆ ಕುಡಿಯುವ ನೀರು ಪೂರೈಕೆಮಾಡಲಾಗುವುದು. ಗ್ರಾಮೀಣ ಪ್ರದೇಶದ ಜನರಿಗೆ ಎಲ್ ಪಿ ಜಿ ವಿತರಣೆಗೆ ವ್ಯಾಪಕ ಯೋಜನೆ, ಪ್ರತೀ ಮನೆಗೆ ವಿದ್ಯುತ್ ಮುಟ್ಟಿಸಲು ಪರಿಣಾಮಕಾರಿ ಕ್ರಮ,ಸ್ವಚ್ಛ ಭಾರತ ಮಿಷನ್ ಅಡಿಯಲ್ಲಿ ಶೌಚಾಲಯ ನಿರ್ಮಾಣ ಮತ್ತು ಕಸ ವಿಲೇವಾರಿಗೆ ಅನುದಾನ, ಉತ್ಪಾದನಾ ವಲಯಕ್ಕೆ, ಕೃಷಿ ಬಲ ತುಂಬುವಂತೆ ಕೃಷಿ ಸನ್ಮಾನ ಯೋಜನೆ,ಪ್ರತೀ ರೈತರಿಗೆ 10 ಸಾವಿರ ರೂ. ಬೆಂಬಲ ಮೊತ್ತ ವಿತರಣೆ ಆಗುತ್ತಿದೆ. ಉತ್ಪಾದನ ವಲಯದಲ್ಲಿ ಮುದ್ರಾ ಯೋಜನೆ, ಪ್ರತೀ ಜಿಲ್ಲೆಗಳಲ್ಲಿ ಸಾವಿರಾರು ಜನರಿಗೆ ಉಪಯೋಗವಾಗಿದೆ. ಐಟಿ,ಬಿಟಿ, ಫಾರ್ಮ, ಕ್ಷೇತ್ರಗಳಲ್ಲಿ ಸ್ಟಾರ್ಟ್ ಅಪ್ ಆರಂಭವಾಗಿದೆ. ಹೊಸ ಭಾರತ ನಿರ್ಮಾಣಕ್ಕೆ ಮೋದಿ ಸರ್ಕಾರದಿಂದ ನಿರಂತರ ಪರಿಶ್ರಮ ನದೆಯುತ್ತಿದೆ.ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್ಫರ್ ಯೋಜನೆ ಮೂಲಕ ನೇರವಾಗಿ ಫಲಾನುಭವಿಗಳಿಗೆ ಲಾಭ ಕಲ್ಪಿಸಲಾಗುತ್ತಿದೆ.ಹೊಸ ಶಿಕ್ಷಣ ನೀತಿಯ ಮೂಲಕ ವಿದ್ಯಾರ್ಥಿಗಳಿಗೆ ವ್ಯಾಪಕ ಅವಕಾಶವಿದ್ದು,21ನೇ ಶತಮಾನದ ಸವಾಲುಗಳಿಗೆ ಹೊಸ ಶಿಕ್ಷಣ ನೀತಿಯೇ ಉತ್ತರವಾಗಿದೆಎಂದು ಸಿಎಂ ವಿವರಿಸಿದರು.
ರಾಜ್ಯದಲ್ಲಿ ಈಥನಾಲ್ ಪೂರೈಕೆಗೆ ಒತ್ತು
ಪರ್ಯಾಯ ಇಂಧನಗಳ ಬಳಕೆಗೆ ಪಿಎಂ ಒತ್ತು ನೀಡುತ್ತಿದ್ದಾರೆ.ಕರ್ನಾಟಕದಲ್ಲಿ ಈಥನಾಲ್ ಪೂರೈಕೆಗೆ ವಿಶೇಷ ಒತ್ತುನೀಡಲಾಗುತ್ತಿದೆ. ಹೈಡ್ರೋಜನ್ ಇಂಧನ ಬಳಕೆಗೆ ಸಂಶೋಧನೆ ನಡೆಯುತ್ತಿದೆ.ಸಮುದ್ರದ ನೀರಿನಿಂದ ಅಮೋನೀಯಂ ಉತ್ಪಾದನೆಗೆ ಸಂಶೋಧನೆ ಪ್ರಗತಿಯಲ್ಲಿದೆ.ಸೆಮಿ ಕಂಡಕ್ಟರ್ ಉತ್ಪಾದನೆಗೆ ಕರ್ನಾಟಕವೇ ಮೊದಲು ಸಹಿ ಮಾಡಿದೆ. ದೇಶದ ಪ್ರಗತಿಗೆ ಹೊಸ ದಿಕ್ಕನ್ನು ಮೋದಿ ಸೂಚಿಸಿದ್ದಾರೆ ಎಂದರು.
ಪಠ್ಯಪುಸ್ತಕ-ವರದಿಯ ಬಳಿಕ ತಿರ್ಮಾನ
ಪಠ್ಯಪುಸ್ತಕ ಪರಿಷ್ಕರಣೆ ಚರ್ಚೆ ವಿಚಾರಕುರಿತ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಎರಡು ವರ್ಗದ ಬೇರೆ ಬೇರೆ ಚರ್ಚೆ ಇದೆ. ಪರಿಷ್ಕರಣೆ ಸರಿ ಮತ್ತು ತಪ್ಪು ಎಂಬ ಚರ್ಚೆಗಳು ನಡೆಯುತ್ತಿವೆ. ಶಿಕ್ಷಣ ಸಚಿವರ ಬಳಿ ಸಮಗ್ರ ವರದಿ ಕೇಳಿದ್ದು,ನಾಳೆ ವರದಿ ಕೊಡುತ್ತಾರೆ.ವರದಿ ಬಂದ ಮೇಲೆ ತೀರ್ಮಾನ ಮಾಡುತ್ತೇವೆ.ಸಾಹಿತಿಗಳು, ಸ್ವಾಮಿಗಳು ಪತ್ರ ಬರೆದಿದ್ದಾರೆ.ಪಾಠ ವಾಪಾಸ್ ಪಡೆಯಬೇಕು ಎಂದವರ ಬಳಿ ಮಾತನಾಡುತ್ತೇನೆ ಎಂದರು.