ಮಂಗಳೂರು, ಜೂ 01 (DaijiworldNews/DB): ಮಂಗಳೂರಿನ ದಂಪತಿಯನ್ನು ಕೆಬಿಸಿ ಬಹುಮಾನದ ಹೆಸರಿನಲ್ಲಿ ವಂಚಿಸಲು ಯತ್ನಿಸಿದ ಘಟನೆ ನಡೆದಿದೆ.
ದಂಪತಿಗೆ ನೀವು 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಬಹುಮಾನ ಪಡೆದುಕೊಳ್ಳಲು ಬ್ಯಾಂಕ್ ವಿವರಗಳೊಂದಿಗೆ ವಾಟ್ಸಾಪ್ ಕಾಲ್ ಮಾತ್ರ ಮಾಡಬೇಕು ಎಂಬುದಾಗಿ +92 ಸಂಖ್ಯೆಯಿಂದ ಆರಂಭವಾಗುವ ಮೊಬೈಲ್ ಸಂಖ್ಯೆಯಿಂದ ವಾಟ್ಸಾಪ್ ಸಂದೇಶವೊಂದು ಮೇ 26ರಂದು ಬಂದಿತ್ತು. ಅಲ್ಲದೆ ಅಮಿತಾಬ್ ಬಚ್ಚನ್ ಚಿತ್ರ ಮತ್ತು ಕೆಬಿಸಿ ಲೋಗೊ ಕೂಡಾ ವಾಟ್ಸಾಪ್ ಸಂದೇಶದಲ್ಲಿ ಮುದ್ರಣಗೊಂಡಿತ್ತು ಎಂದು ದಂಪತಿ ತಿಳಿಸಿದ್ದಾರೆ.
ನವದೆಹಲಿಯಲ್ಲಿಯೂ ಮಹಿಳೆಯೋರ್ವರಿಗೆ ಈ ರೀತಿಯ ವಂಚನೆ ನಡೆದಿದ್ದು, 25 ಲಕ್ಷ ರೂ. ಬಹುಮಾನ ಗೆದ್ದಿದ್ದು, ಅದನ್ನು ಪಡೆದುಕೊಳ್ಳಲು 12,500 ರೂ. ತೆರಿಗೆ ಕಳುಹಿಸಬೇಕು ಎಂದು ತಿಳಿಸಿದ್ದರು. ಅದನ್ನು ಕಳುಹಿಸಿದಾಗ ಮತ್ತೆ 25000 ರೂ. ಕಳುಹಿಸಲು ಹೇಳಿದ್ದಾರೆ. ಇದರಿಂದ ಸಂಶಯಗೊಂಡ ಅವರು ಪೊಲೀಸ್ ದೂರು ನೀಡಿದ್ದಾರೆ. ದೂರಿನ ಮೇರೆಗೆ ವಂಚಕರಾದ ಬಿಹಾರ ಮೂಲದ ಪ್ರಣವ್ಕುಮಾರ್ ಮಿಶ್ರಾ (23) ಮತ್ತು ಜಾರ್ಖಂಡ್ನ ಗೌತಮ್ಪ್ರಸಾದ್ ಯಾದವ್ (29) ಅವರನ್ನು ಮಂಗಳವಾರ ಬಂಧಿಸಿದ್ದಾರೆ.
ಆರೋಪಿಗಳು ಹರಿಯಾಣದಲ್ಲೂ ಇಂತಹುದೇ ಕೃತ್ಯ ಎಸಗಿದ್ದರು ಎನ್ನಲಾಗಿದೆ. ಐದು ಮೊಬೈಲ್ ಫೋನ್, 33 ಸಿಮ್ ಕಾರ್ಡ್, 11 ಡೆಬಿಟ್ ಕಾರ್ಡ್, 5 ಬ್ಯಾಂಕ್ ಪಾಸ್ಬುಕ್ ಮತ್ತು ನಕಲಿ ಐಡಿ ಕಾರ್ಡ್ಗಳನ್ನು ಪೊಲೀಸರು ಆರೋಪಿಗಳಿಂದ ವಶಪಡಿಸಿಕೊಂಡಿದ್ದಾರೆ.