ಉಡುಪಿ, ಜೂ 01 (DaijiworldNews/DB): ಅನಿವಾಸಿ ಭಾರತೀಯ ಉದ್ಯಮಿ ಬಿ.ಆರ್.ಶೆಟ್ಟಿ ಅವರು ನಿರ್ಮಿಸಿದ ಉಡುಪಿಯ ಮಕ್ಕಳ ಮತ್ತು ಮಹಿಳಾ ಆಸ್ಪತ್ರೆಯನ್ನು ಇದೀಗ ಸರ್ಕಾರ ವಶಕ್ಕೆ ಪಡೆದಿದ್ದರೂ, ಅಲ್ಲಿನ ಸಮಸ್ಯೆಗಳು ಇನ್ನೂ ಬಗೆಹರಿದಿಲ್ಲ. ಕಳೆದ 5 ತಿಂಗಳಿಂದ ವೇತನ ನೀಡಿರುವುದರಿಂದ ಆಸ್ಪತ್ರೆಯ ಸಿಬ್ಬಂದಿಗಳು ಮಂಗಳವಾರ ಪ್ರತಿಭಟನೆ ನಡೆಸಿದರು.
ಹಿಂದಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರೋಗ್ಯ ಇಲಾಖೆಯ ಭೂಮಿಯಲ್ಲಿ ಬಿ.ಆರ್.ಶೆಟ್ಟಿ ವೆಂಚರ್ಸ್ ಮೂಲಕ 30 ವರ್ಷ ಗುತ್ತಿಗೆ ಆಧಾರದಲ್ಲಿ ಕೂಸಮ್ಮ ಶಂಭು ಶೆಟ್ಟಿ ಹಾಜಿ ಅಬ್ದುಲ್ಲಾ ಸ್ಮಾರಕ ತಾಯಿ ಮಕ್ಕಳ ಆಸ್ಪತ್ರೆಯನ್ನು ನಿರ್ಮಿಸಿದ್ದರು.ಇದೀಗ ತೀವ್ರ ಆರ್ಥಿಕ ನಷ್ಟದಲ್ಲಿರುವ ಬಿ.ಆರ್.ಶೆಟ್ಟಿ ಅವರು ಆಸ್ಪತ್ರೆ ನಡೆಸಲಾಗದೇ ಸರ್ಕಾರದ ಸುಪರ್ದಿಗೆ ಹಿಂತಿರುಗಿಸಿದ್ದರು.
ಈ ನಡುವೆ ಆಸ್ಪತ್ರೆಯ ಸಿಬ್ಬಂದಿಗಳಿಗೆ ಮೂರ್ನಾಲ್ಕು ತಿಂಗಳ ವೇತನ ನೀಡದಿದ್ದಾಗ ಇದುವರೆಗೆ 3 ಬಾರಿ ಮುಷ್ಕರ ನಡೆಸಲಾಗಿದ್ದು, ಅಲ್ಪಸ್ವಲ್ಪ ವೇತನ ಬಿಡುಗಡೆ ಮಾಡಲಾಗುತ್ತಿತ್ತು.ಜೂನ್ 1ರಿಂದ ಆಸ್ಪತ್ರೆಯನ್ನು ರಾಜ್ಯ ಸರ್ಕಾರವೇ ನಡೆಸಲಿದೆ. ಆದರೇ ಇದುವರೆಗೆ ಆಸ್ಪತ್ರೆಯನ್ನು ನಡೆಸಿದ ಬಿ.ಆರ್.ಶೆಟ್ಟಿ ವೆಂಚರ್ಸ್ ಸಿಬ್ಬಂದಿಗಳಿಗೆ 4 ತಿಂಗಳ ವೇತನ ಬಾಕಿ ಇಟ್ಟಿದ್ದು, ಇದನ್ನು ಸರ್ಕಾರ ಪಾವತಿಸುವ ಬಗ್ಗೆ ಮತ್ತು ಖಾಸಗಿಯಾಗಿ ನೇಮಿಸಲಾಗಿರುವ ಎಲ್ಲಾ ಸಿಬ್ಬಂದಿಗಳನ್ನು ಉಳಿಸಿಕೊಳ್ಳುವ ಭರವಸೆ ಸಿಗದಿರುವುದರಿಂದ ಸಿಬ್ಬಂದಿಗಳು ಮಂಗಳವಾರ ಮತ್ತೆಪ್ರತಿಭಟನೆ ನಡೆಸಿ ಸರ್ಕಾರದ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.