ಮಂಗಳೂರು, ಮೇ 31 (DaijiworldNews/SM): ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ದೇಶದ ಅಭಿವೃದ್ದಿಗೆ ಎಲ್ಲಾ ಜನಾಂಗಗಳೂ ಕೊಡುಗೆ ನೀಡಿದೆ. ಯಾವುದೇ ಒಂದು ಸಮುದಾಯವನ್ನು ದೂರವಿಟ್ಟು, ದೇಶ ಅಭಿವೃದ್ಧಿ ಹೊಂದಲು ಸಾಧ್ಯವಿಲ್ಲ ಎಂದು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವ, ಶಾಸಕ ಡಾ. ಕೆ.ಟಿ. ಜಲೀಲ್ ಹೇಳಿದರು.
ಮೇ 31ರಂದು ನಗರದ ಕುದ್ಮುಲ್ ರಂಗರಾವ್ ಪುರಭವನದಲ್ಲಿ ಜಾತ್ಯಾತೀತತೆ, ಸಬಲೀಕರಣ ಮತ್ತು ಮುನ್ನಡೆ’ ಎಂಬ ಘೋಷಣೆಯಡಿ ಭಾರತ ಕಮ್ಯೂನಿಸ್ಟ್ ಪಕ್ಷ ಕರ್ನಾಟಕ ರಾಜ್ಯ ಸಮಿತಿ ಆಯೋಜನೆ ಮಾಡಿದ ರಾಜ್ಯಮಟ್ಟದ ಮುಸ್ಲಿಂ ಸಮಾವೇಶವನ್ನು ಕೇರಳದ ಮಾಜಿ ಉನ್ನತ ಶಿಕ್ಷಣ ಸಚಿವ, ಶಾಸಕ ಡಾ. ಕೆ.ಟಿ. ಜಲೀಲ್ ಉದ್ಘಾಟಿಸಿ ಮಾತನಾಡಿದರು. "ನಮ್ಮ ದೇಶ ಜಾತ್ಯಾತೀತ ರಾಷ್ಟ್ರವಾಗಿದೆ. ಎಲ್ಲವನ್ನು ಭಾರತ ಒಳಗೊಳ್ಳುತ್ತಿದೆ. ಈ ಜಾತ್ಯಾತೀತತೆಯ ಸಂಪ್ರದಾಯವೇ ಪ್ರಜಾಪ್ರಭುತ್ವವನ್ನು ಕಾಯುತ್ತಿರುವುದು. ನಮ್ಮ ದೇಶವು ಯಾವುದೇ ಧರ್ಮವನ್ನು ಯಾವುದೇ ಕಾಲದಲ್ಲಿ ನಿರಾಕರಿಸಿಲ್ಲ. ಹಿಂದೂ ಧರ್ಮದ ಅಶೋಕ ಚಕ್ರವರ್ತಿ ಕಳಿಂಗ ಯುದ್ದದ ನಂತರ ಬೌಧ್ಧ ಧರ್ಮ ಪಾಲಿಸಿದರು. ಅವರು ಬೌದ್ಧ ಧರ್ಮ ಸ್ವೀಕರಿಸಿದ ನಂತರ ಅವರನ್ನು ಯಾರೂ ಪ್ರಶ್ನಿಸಿಲ್ಲ. ಮುಸ್ಲಿಂ ರಾಜರು 900 ವರ್ಷಗಳ ಕಾಲ ಆಡಳಿತ ನಡೆಸಿದರು. ಒಂದು ವೇಳೆ ಅವರು ಧರ್ಮವನ್ನು ಆಡಳಿತದಲ್ಲಿ ಜೊತೆಯಾಗಿಸಿದ್ದರೆ ಇಷ್ಟೊಂದು ಧೀರ್ಘ ಕಾಲ ಆಡಳಿತ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ದೇಶದ ಮೊದಲ ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲಿ ಮೊಘಲ್ ಸಾಮ್ರಾಜ್ಯದ ಚಕ್ರವರ್ತಿ ಬಹದ್ದೂರೂ ಶಾ ಜಫಾರ್ ದೇಶದ ಬಹಸಂಖ್ಯಾತ ಹಿಂದೂಗಳು ತಮ್ಮ ನಾಯಕರಾಗಿ ಆಯ್ಕೆ ಮಾಡಿದ್ದರು," ಎಂದು ವಿವರಿಸಿದರು.